ಬೆಂಗಳೂರು, ಸೆ.20 : ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದ್ದು, ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಸಲು ನಂದಿನಿ ತುಪ್ಪವನ್ನೇ ಬಳಸುವಂತೆ ಮುಜುರಾಯಿ ಇಲಾಖೆ ಆದೇಶಿಸಿದೆ.
ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಅಡಿ ಬರುವ ಎಲ್ಲಾ ಅಧಿಸೂಚಿತ ದೇವಸ್ಥಾನಗಳಲ್ಲಿ ಸೇವೆಗಳಿಗೆ, ದೀಪಗಳಿಗೆ ಮತ್ತು ಎಲ್ಲಾ ವಿಧದ ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನು ಮಾತ್ರ ಉಪಯೋಗಿಸಬೇಕು. ದೇವಾಲಯಗಳಲ್ಲಿ ತಯಾರಿಸಲಾಗುವ ಪ್ರಸಾದಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.