ಮಣಿಪುರ, ಫೆ. 03 : ಕಳೆದ ಒಂದು ವರ್ಷದಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಚಿವ ಯುಮ್ನಮ್ ಖೇಮ್ಚಂದ್ ಸಿಂಗ್ ಅವರನ್ನು ಬಿಜೆಪಿ ಪಕ್ಷ ಆಯ್ಕೆ ಮಾಡಲಾಗಿದೆ.
ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ನಡುವೆ 2025ರ ಫೆಬ್ರವರಿ 9ರಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು. ಅಂದಿನಿಂದ ಈ ಹುದ್ದೆ ಖಾಲಿಯಾಗಿತ್ತು. ಅದಾದ ಕೆಲವೇ ದಿನಗಳ ನಂತರ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
ದೆಹಲಿಯಲ್ಲಿ ನಡೆದ ಸಭೆಯ ನಂತರ ಮಣಿಪುರದ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಯುಮ್ನಮ್ ಖೇಮ್ಚಂದ್ ಸಿಂಗ್ ಅವರ ಹೆಸರನ್ನು ಘೋಷಿಸಲಾಯಿತು. ಖೇಮ್ಚಂದ್ ಸಿಂಗ್ ಎರಡುಬಾರಿ ಶಾಸಕರಾಗಿದ್ದಾರೆ. ಅವರು 2017ರಲ್ಲಿ ಮತ್ತು ನಂತರ 2022ರಲ್ಲಿ ಸಿಂಗ್ಜಮೈ ವಿಧಾನಸಭಾ ಸ್ಥಾನದಿಂದ ಸತತ ಎರಡು ಅವಧಿಗೆ ಆಯ್ಕೆಯಾಗಿದ್ದರು.
ಮಾಜಿ ಸಚಿವ ಯುಮ್ನಮ್ ಖೇಮ್ಚಂದ್ ಸಿಂಗ್ ಅವರು ಈಶಾನ್ಯ ರಾಜ್ಯದಲ್ಲಿ ಬಿಜೆಪಿಯ ಎರಡನೇ ಮುಖ್ಯಮಂತ್ರಿಯಾಗಲಿದ್ದಾರೆ.











