ಟೆಹ್ರಾನ್, ಏ. 03 : ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿಯು ಮುಂದುವರೆದಿದೆ. ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧವು ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಇರಾನ್ನ ಅಲ್ಬೋರ್ಜ್ ಪ್ರಾಂತ್ಯದಲ್ಲಿ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿಯಿಂದಾಗಿ ಕರಾಜ್ನಲ್ಲಿರುವ ಬಿ1 ಸೇತುವೆ ಧ್ವಂಸವಾಗಿದೆ.
ಅಮೆರಿಕ- ಇಸ್ರೇಲ್ ಕ್ಷಿಪಣಿ ದಾಳಿಯಿಂದಾಗಿ ಕರಾಜ್ನಲ್ಲಿರುವ ಬಿ1 ಸೇತುವೆಯ ಮಧ್ಯ ಭಾಗ ನಾಶವಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಈ ದಾಳಿಯಲ್ಲಿ 8 ಮಂದಿ ಸಾವಿಗೀಡಾಗಿದ್ದು, 95 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಬೋರ್ಜ್ ಪ್ರಾಂತ್ಯದ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಸುದ್ದಿಗೋಷ್ಠಿ ನಡೆಸಿ, ಇರಾನ್ ಮೇಲಿನ ದಾಳಿಯನ್ನು ಮುಂದುವರೆಸುವುದಾಗಿ ಹೇಳಿದ್ದರು. ಹಾರ್ಮುಜ್ ಜಲಸಂಧಿಯ ಬಗ್ಗೆ ಮಾತನಾಡುತ್ತಾ, ನಮಗೆ ಅಲ್ಲಿಂದ ಯಾವುದೇ ಉಪಯೋಗವಿಲ್ಲ. ನಮ್ಮ ಹಡಗುಗಳು ಅಲ್ಲಿಂದ ಬರುವುದಿಲ್ಲ. ನಮ್ಮಲ್ಲೇ ಬೇಕಾದಷ್ಟು ತೈಲವಿದೆ. ಬೇಕಿದ್ದರೆ ನಮ್ಮಿಂದ ತೈಲ ಖರೀದಿಸಿ ಎಂದು ಇತರ ದೇಶಗಳಿಗೆ ಸಲಹೆ ನೀಡಿದ್ದರು.











