ಸ್ಯಾಂಟೋ ಡೊಮಿಂಗೊ, ಜೂ. 09 : ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಖಾಸಗಿ ಜೆಟ್ ವೊಂದನ್ನು ಭೂಸ್ಪರ್ಶ ಮಾಡುವ ವೇಳೆ ಪತನಗೊಂಡು, ಪೈಲಟ್ ಹಾಗೂ ಸಹ ಪೈಲಟ್ ಇಬ್ಬರೂ ಸಾವನಪ್ಪಿರುವ ಘಟನೆ ಭಾನುವಾರ ನಡೆದಿದೆ. ವಿಮಾನ ಹೊತ್ತಿಯುರಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಪಘಾತದಲ್ಲಿ ಪೈಲಟ್‌ಗಳಾದ ಎರಿಕ್ ಜೇವಿಯರ್ ಡಿಯಾಗೋ ಮತ್ತು ರೂಡಿ ಗಜಲ್ ಮೃತಪಟ್ಟಿದ್ದಾರೆ. ಪೈಲಟ್ ಹೊರತಾಗಿ ವಿಮಾನದಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ ಎಂದು ಡೊಮಿನಿಕನ್ ನಾಗರಿಕ ವಿಮಾನ ಯಾನ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಖಾಸಗಿ ಜೆಟ್ ಗಲ್ಫ್ ಸ್ಟ್ರೀಮ್ ಜಿ200 ಲಾ ರೊಮಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೆಕ್ಸಾಸ್ನ ಆಸ್ಟಿನ್‌ಗೆ ಹೊರಟಿತ್ತು.ಈ ವೇಳೆ ಜೆಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ತುರ್ತು ಲ್ಯಾಂಡ್ ಆಗುತ್ತಿದ್ದಾಗ ವಿಮಾನ ನಿಯಂತ್ರಣ ಕಳೆದುಕೊಂಡಿದ್ದು, ಪಕ್ಕದ ಹುಲ್ಲುಗಾವಲು ಪ್ರದೇಶಕ್ಕೆ ನುಗ್ಗಿ, ಕ್ಷಣಾರ್ಧದಲ್ಲಿ ಹೊತ್ತಿಉರಿದಿದೆ ಎಂದು ವರದಿಯಾಗಿದೆ.
ವಿಮಾನ ನಿಲ್ದಾಣದ ರಕ್ಷಣಾ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವಲ್ಲಿ ಕಾರ್ಯನಿರತರಾದರೂ ಕೂಡ ಪೈಲಟ್‌ಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.











