ಬ್ಯಾಂಕಾಕ್, ಜು. 14 : ಪಬ್ವೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ, ಕನಿಷ್ಠ 27 ಜನ ಸಾವನ್ನಪ್ಪಿ ದ್ದು , 63 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.
ಬ್ಯಾಂಕಾಕ್ ನಗರದ ಉತ್ತರ ಭಾಗದ ಚತುಚಕ್ ಜಿಲ್ಲೆಯ ರೋಂಗ್ ಬೀರ್ ನಾ ಲಾಟ್ ಫ್ರಾವೊ ಪಬ್ವೊಂದರಲ್ಲಿ ಮಧ್ಯರಾತ್ರಿ ಸುಮಾರಿಗೆ ಮಧ್ಯರಾತ್ರಿಯ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆ. 63 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬ್ಯಾಂಕಾಕ್ ಗವರ್ನರ್ ಚಡ್ಚಾರ್ಟ್ ಸಿಟ್ಟಿಪುಂಟ್ ಮಾಧ್ಯಮಗಳೊಂದಿಗೆ ಮಾತನಾಡಿ, ಬೆಂಕಿ ತೀವ್ರ ವೇಗದಲ್ಲಿ ಚಾವಣಿಗೆ ವ್ಯಾಪಿಸಿದೆ. ಪಬ್ ನಲ್ಲಿ ಸಿಕ್ಕಿಬಿದ್ದ ಜನರಿಗೆ ಉಸಿರುಗಟ್ಟುವಂತೆ ಮಾಡಿದ ದಟ್ಟವಾದ ಕಪ್ಪು ಹೊಗೆಯೇ ಇಷ್ಟೊಂದು ದೊಡ್ಡ ಮಟ್ಟದ ಸಾವಿಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಥೈಲ್ಯಾಂಡ್ ಪ್ರಧಾನಿ ಅನುತಿನ್ ಚಾರ್ನ್ವಿರಕುಲ್, ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಪಬ್ನಲ್ಲಿ ಪ್ರದರ್ಶನ ನೀಡುತ್ತಿದ್ದ ಸಂಗೀತಗಾರನೊಬ್ಬನ ಹೇಳಿಕೆಯ ಪ್ರಕಾರ, ವೇದಿಕೆಯ ಪಕ್ಕದಲ್ಲಿದ್ದ ಸರ್ಕ್ಯೂಟ್ ಬ್ರೇಕರ್ನಿಂದ ಮೊದಲು ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಂಡು ಕ್ಷಣಾರ್ಧದಲ್ಲಿ ಇಡೀ ಪಬ್ ಕಡುಗತ್ತಲು ಮತ್ತು ದಟ್ಟ ಹೊಗೆಯಿಂದ ಆವೃತವಾಯಿತು ಎಂದು ಅವರು ತಿಳಿಸಿದ್ದಾರೆ.
ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.











