ಬಂಟ್ವಾಳ, ಸೆ.24 : ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ಬಂಟ್ವಾಳ ಕಸಬಾ ಗ್ರಾಮದ ಕೆಮ್ಮಟ್ಟೆ ಗುಡ್ಡೆಯಲ್ಲಿ ನಡೆದಿದೆ.
ಮೃತರನ್ನು ಕೆಮ್ಮಟ್ಟೆ ಗುಡ್ಡೆ ನಿವಾಸಿ ಕಮಲಾ (74) ಎಂದು ಗುರುತಿಸಲಾಗಿದೆ.
ಕಮಲಾ ಅವರು ಸೆ.23ರಂದು ಬೆಳಗ್ಗೆ ಮನೆಯ ಪಕ್ಕದಲ್ಲಿರುವ ಅಡಿಕೆ ತೋಟಕ್ಕೆ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಹೆಜ್ಜೆನುಗಳು ಅವರ ಬೆನ್ನು, ಕಾಲು, ಮುಖ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಕಚ್ಚಿವೆ. ಬಳಿಕ ಸುಮಾರು 11 ಗಂಟೆಗೆ ಮನೆಗೆ ಬಂದ ಅವರು ಘಟನೆ ಕುರಿತು ಪುತ್ರ ದಿನೇಶ್ ಅವರಿಗೆ ತಿಳಿಸಿದ್ದರು.
ತಕ್ಷಣ ಅವರನ್ನು ಬಂಟ್ವಾಳದ ಕ್ಲಿನಿಕ್ ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದಿದ್ದರು. ಬಳಿಕ ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಸಾವನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ದಿನೇಶ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











