ಕಡಬ, ಸೆ.26 : ಬೈಕ್ ಗೆ ಥಾರ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನಪ್ಪಿದ ಘಟನೆ ಕಡಬ-ಉಪ್ಪಿನಂಗಡಿ ಮುಖ್ಯರಸ್ತೆಯ ಅಲಂಕಾರು ಬಳಿ ಸೆ.25 ರ ರಾತ್ರಿ ನಡೆದಿದೆ. ಅಪಘಾತದ ನಂತರ ಥಾರ್ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಮೃತರನ್ನು ಅಲಂಕಾರು ನಿವಾಸಿ ಲೋಕೇಶ್ ಗೌಡ ಎಂದು ಗುರುತಿಸಲಾಗಿದೆ.
ಕಪ್ಪು ಬಣ್ಣದ ಥಾರ್ ವಾಹನ ಚಾಲಕ ಅತಿವೇಗದಿಂದ ವಾಹನ ಚಲಾಯಿಸಿ ಹಿಂದಿನಿಂದ ಬಂದು ಲೋಕೇಶ್ ಅವರ ಬೈಕ್ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಲೋಕೇಶ್ ತನ್ನ ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡರು. ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ , ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ನಂತರ, ಕಡಬ ಪೊಲೀಸರು ಅಪರಾಧ ಸಂಖ್ಯೆ 112/2026 ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 281 ಮತ್ತು 106 ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 134 (ಎ) ಮತ್ತು (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.











