ಮಂಗಳೂರು,ಅ.13 : ಗಂಜಿಮಠದ ಹೈಡ್ಜೆನ್ ಸಂಸ್ಥೆಯ ನೂತನ ಉತ್ಪಾದನಾ ಘಟಕ ಅಕ್ಟೋಬರ್ 15ರಂದು ಲೋಕಾರ್ಪಣೆಗೊಳ್ಳಲಿದೆ. ವಾರ್ಷಿಕ 20 ಮೆಗಾವ್ಯಾಟ್ ಸಾಮರ್ಥ್ಯದ ಹೈಡ್ರೋಜನ್ ಎಲೆಕ್ಟ್ರೋಲೈಸರ್‌ಗಳನ್ನು ಉತ್ಪಾದಿಸುವ ಈ ಘಟಕದಲ್ಲಿ 250 ಕಿಲೋವ್ಯಾಟ್ ಸಾಮರ್ಥ್ಯದ ಎಇಎಂ ಮತ್ತು ಪಿಇಎಂ ಎಲೆಕ್ಟ್ರೋಲೈಸರ್‌ಗಳನ್ನು ಅನಾವರಣಗೊಳಿಸಲಾಗುವುದು. ಎಂದು ಹೈಡ್ಜೆನ್ ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೃಷ್ಣ ಕುಮಾರ್ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಸ್‌ಐಆರ್–ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯ ನಿರ್ದೇಶಕ ಡಾ.ಆಶಿಶ್ ಲೆಲೆ ಮುಖ್ಯ ಭಾಷಣ ಮಾಡಲಿದ್ದು, ಹೈಡ್ರೋಜನ್ ತಂತ್ರಜ್ಞಾನಗಳ ವಾಣಿಜ್ಯ ಬಳಕೆ ಕುರಿತು ತಜ್ಞರ ಚರ್ಚೆಗಳು ನಡೆಯಲಿವೆ. ಪ್ರಯೋಗಾಲಯದಲ್ಲಿ ಬೆಳೆಸುವ ವಜ್ರ, ಔಷಧ, ವಿಶೇಷ ರಾಸಾಯನಿಕ ಹಾಗೂ ಸೆಮಿಕಂಡಕ್ಟರ್ ಉದ್ಯಮಗಳಲ್ಲಿ ಈ ಉಪಕರಣಗಳಿಗೆ ಬೇಡಿಕೆಯಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ರಮ್ಯಶ್ರೀ, ಸಂಜಯ್, ಚಂದ್ರಶೇಖರ್, ಅಮೃತೇಶ್ ಹಾಗೂ ವೆಂಕಟರಮಣ ಉಪಸ್ಥಿತರಿದ್ದರು.











