ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದು ಶಾಂತಿ ಸುವ್ಯವಸ್ಥೆಗೆ ತೊಂದರೆಯುಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜು. 29ರಿಂದ ಆಗಸ್ಟ್ 1ರವರೆಗೆ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಕೆಲವು ಅಹಿತಕರ ಘಟನೆಗಳಿಂದಾಗಿ ಪರಿಸ್ಥಿತಿ ಬೂದಿಮುಟ್ಟಿದ ಕೆಂಡದಂತಿದ್ದು, ಉದ್ವಿಗ್ನತೆಯಿಂದ ಕೂಡಿರುವುದರಿಂದ ಕಾನೂನು ಸುವ್ಯವಸ್ಥೆಗೆ ಯಾವುದೇ ದಕ್ಕೆಯುಂಟಾಗದಂತೆ ಜಿಲ್ಲೆಯಾದ್ಯಂತ ಬಿಗಿ ಕ್ರಮಗಳನ್ನು ಕೈ ಗೊಳ್ಳಲಾಗಿದೆ. ಅದರ ಪ್ರಕಾರ ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಇತರೆ ತುರ್ತು ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು ಜಿಲ್ಲೆಯಾದ್ಯಂತ ತೆರೆಯಲು ಅವಕಾಶವಿರುವುದಿಲ್ಲ.
ಬಸ್ಸು, ಟ್ಯಾಕ್ಸಿ ಮತ್ತು ಆಟೋರಿಕ್ಷಾಗಳ ಸಂಚಾರಕ್ಕೆ ಅವಕಾಶವಿರುತ್ತದೆ . ಅಗತ್ಯ ವಸ್ತುಗಳ ಸಾಗಾಣಿಕೆಗೆ ಅವಕಾಶವಿದೆ. ಅನಗತ್ಯ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಹೋಟೆಲ್ ನಲ್ಲಿ ಪಾರ್ಸೆಲ್ಗೆ ಅವಕಾಶವಿದೆ ಎಂದು ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.