ಮಂಗಳೂರು, ಆ. 31: ನಗರದ ಪಂಪ್‌ವೆಲ್‌ನಲ್ಲಿರುವ ಇಂಡಿಯಾನ ಆಸ್ಪತ್ರೆ ಮತ್ತು ಹೃದಯ ಚಿಕಿತ್ಸಾ ಕೇಂದ್ರದಲ್ಲಿ ‘ಇಂಡಿಯಾನ ಕ್ಯಾನ್ಸರ್ ಸೆಂಟರ್’ ಆ.30 ಶುಕ್ರವಾರ ಉದ್ಘಾಟನೆಗೊಂಡಿತು. ಇಂಡಿಯಾನ ಕ್ಯಾನ್ಸರ್ ಸೆಂಟರ್ ಇದರ ಉದ್ಘಾಟನೆಯನ್ನು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ನೆರವೇರಿಸಿದರು.
ನಂತರ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ತಂತ್ರಜ್ಞಾನ ಬೆಳೆಯುತ್ತಿರುವಂತೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ಹೊಸ ಸಂಶೋಧನೆಗಳು ನಡೆಯುತ್ತಿವೆ. ಆಧುನಿಕ ಕಾಲದಲ್ಲಿ ಜನರು ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಬಯಸುತ್ತಾರೆ. ರಾಜ್ಯದ ಸರಕಾರಿ ಜಿಲ್ಲಾಸ್ಪತ್ರೆಗಳಲ್ಲಿ ‘ಕ್ಯಾನ್ಸರ್ ಡೇಕೇರ್ ಕಿಮೋ ಸೆಂಟರ್ ‘ಗಳನ್ನು ಮುಂದಿನ ತಿಂಗಳಿನಿಂದ ಆರಂಭಿಸಲಾಗುವುದು.ಜಿಲ್ಲೆ ಹಾಗೂ ಹೊರಗಿನವರಿಗೆ ಗುಣಮಟ್ಟದ ಚಿಕಿತ್ಸೆ ಇಂಡಿಯಾನದ ಮೂಲಕ ಲಭಿಸುವಂತಾಗಲಿ ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ| ಯೂಸುಫ್ ಕುಂಬ್ಳೆ ಮಾತನಾಡಿ, ಇಂಡಿಯಾನ ಆಸ್ಪತ್ರೆಯಲ್ಲಿ ಸುಧಾರಿತ ಕ್ಯಾನ್ಸರ್ ಚಿಕಿತ್ಸೆಯ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಿದೆ. ಉತ್ತಮ, ಜನರಿಗೆ ಕೈಗೆಟುಕುವ ಕ್ಯಾನ್ಸರ್ ಆರೈಕೆಯನ್ನು ನೀಡುವ ಮೂಲಕ, ಇಂಡಿಯಾನ ಕ್ಯಾನ್ಸರ್ ಸೆಂಟರ್ ಈ ಪ್ರದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಕೊರತೆಯನ್ನು ನೀಗಲು ಪ್ರಯತ್ನಿಸಲಿದೆ ಎಂದರು.
ಸಂಸ್ಥೆಯ ಚೇರ್ಮನ್ ಡಾ| ಅಲಿ ಕುಂಬ್ಳೆ ಮಾತನಾಡಿ, ಇಂಡಿಯಾನ ಆಸ್ಪತ್ರೆಯಲ್ಲಿ ಸುಧಾರಿತ ಚಿಕಿತ್ಸಾ ಪದ್ಧತಿ ಇರಲಿದೆ. ಆಧುನಿಕ ತಂತ್ರಜ್ಞಾನದ ಮೂಲಕ ದೇಹದ ಯಾವುದೇ ಭಾಗಗಳಿಗೆ ಕ್ಯಾನ್ಸರ್ ತಗಲಿದರೂ ಅದಕ್ಕೆ ವಿಶಿಷ್ಟ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುವುದು ಎಂದರು.
ಕರ್ನಾಟಕ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ| ಯು.ಟಿ. ಇಪ್ಲಿಕಾರ್ ಮತ್ತು ಮ.ನ.ಪಾ. ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್. ತಿಮ್ಮಯ್ಯ, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ವೈದ್ಯಕೀಯ ಆಡಳಿತ ನಿರ್ದೇಶಕ ಡಾ| ಆದಿತ್ಯ ಭಾರದ್ವಾಜ್, ಸಿಇಒ ವಿಜಯಚಂದ್ರ ಇ, ಗೈನಕಾಲಜಿಸ್ಟ್ ಡಾ| ಸಂಗೀತಾ ಕೆ., ವೈದ್ಯಕೀಯ ನಿರ್ದೇಶಕ ಡಾ|ಅಪೂರ್ವ, ಸರ್ಜಿಕಲ್ ಆಂಕಾಲಜಿಸ್ಟ್ ಡಾ| ಅಜಯ್ ಕುಮಾರ್, ರೇಡಿಯೇಷನ್ ಆಂಕಾಲಜಿಸ್ಟ್ ಡಾ| ಕೃಷ್ಣರಾಜ್ ಎಚ್. ಆರ್. ಉಪಸ್ಥಿತರಿದ್ದರು.