ಮಂಗಳೂರು, ಸೆ. 23 : ಯುನಿಸೆಕ್ಸ್ ಸೆಲೂನ್ ಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ.
ಯುನಿಸೆಕ್ಸ್ ಸೆಲೂನ್ ಗಳ ಹೆಸರಿನಲ್ಲಿ ಕೆಲವೆಡೆ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ದೂರುಗಳು ಬಂದಿವೆ. ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ನಗರದ 14 ಸೆಲೂನ್ಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಸೆಲೂನ್ ಮಾಲೀಕರು ತಮ್ಮ ಕೆಲಸಗಾರರ ಬಗ್ಗೆ ಪೊಲೀಸ್ ದೃಢೀಕರಣ ಪಡೆಯಬೇಕು. ರಿಸೆಪ್ಷನ್, ಪ್ರವೇಶ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಎಲ್ಲ ಗ್ರಾಹಕರ ಮಾಹಿತಿ ದಾಖಲಿಸಿಕೊಳ್ಳಬೇಕು. ಸಂಬಂಧಿಸಿದ ಇತರ ಇಲಾಖೆಗಳ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈ ನಿಯಮ ಮೀರಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.