ಮಂಗಳೂರು, ಫೆ. 10 : ಕೇಂದ್ರ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ಮಿಷನ್ ಉತ್ವಾನ್’ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳ ಸಹಯೋಗದಲ್ಲಿ 8 ‘ಇನ್ ಕ್ಯುಬೇಷನ್ ಸೆಂಟರ್’ಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಈ ಯೋಜನೆಯನ್ನು ದಕ್ಷಿಣದ ರಾಜ್ಯಗಳಲ್ಲಿ ಮುನ್ನಡೆಸಲಿರುವ ‘ಸೆಕ್ಷನ್ ಇನ್‌ಫಿನ್-8 ಫೌಂಡೇಶನ್’ನ ಸ್ಥಾಪಕ ನಿರ್ದೇಶಕ ವಿಶ್ವಾಸ್ ಯು.ಎಸ್. ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಉದ್ಯಮ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಉದ್ಯಮಿಶೀಲತೆಗೆ ಸಂಬಂಧಿಸಿದಂತೆ ಸಂಶೋಧನೆ ಪ್ರೋತ್ಸಾಹಿಸುವುದು ಮಿಷನ್ ಉತ್ಪಾನ್ ಯೋಜನೆಯ ಮುಖ್ಯ ಉದ್ದೇಶ ವಾಗಿದೆ. ಗ್ರಾಮೀಣ ಕೇಂದ್ರಿತ ಸೆಂಟರ್‌ಗಳನ್ನು ಸ್ಥಾಪಿಸುವುದು ಉದ್ಯಮಶೀಲತೆಯ ಸಂಶೋಧನೆ, ಆರ್ಥಿಕ ಸಬಲೀಕರಣಕ್ಕಾಗಿ ಈ ‘ಇನ್‌ಕ್ಯುಬೇಷನ್ ಸೆಂಟರ್’ಗಳನ್ನು ಆರಂಭಿಸಲಾಗುವುದು. ಇದಕ್ಕಾಗಿ ಐಐಟಿಯಿಂದ ಉಚಿತವಾಗಿ ತಾಂತ್ರಿಕ ಸೇವೆಯನ್ನು ಪಡೆದುಕೊಳ್ಳಲಾಗುವುದು ಎಂದರು.
ಮಿಷನ್ ಉತ್ಪಾನ್ ಯೋಜನೆಯ ಅನುಷ್ಠಾನ ಕುರಿತಂತೆ ಮಂಗಳೂರಿನ ಕೆನರಾ ಎಂಜಿನಿಯರಿಂಗ್ ಕಾಲೇಜು, ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ಮತ್ತು ಉಡುಪಿಯ ಮಧ್ಯ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್‌ಮೆಂಟ್‌ನೊಂದಿಗೆ ಸಹಭಾಗಿತ್ವ ಹೊಂದಲಾಗಿದೆ ಎಂದು ವಿಶ್ವಾಸ್ ಅವರು ಮಾಹಿತಿ ನೀಡಿದರು.
ಸೆಕ್ಷನ್ ಇನ್ ಫೈನ್-8 ಫೌಂಡೇಶನ್ನ ಸಿಇಒ ಅರವಿಂದ ಸಿ. ಕುಮಾರ್, ವೈಟ್ ಕಾಲರ್ ಸ್ವಯಂಸೇವಕಿ ಸೌಜನ್ಯಾ ಬಿ., ಇವೆಂಟ್ ಹೆಡ್ ಪ್ರೇಕ್ಷಾ ತೇಜ್, ವೈಟ್ ಕಾಲರ್ ಸ್ವಯಂಸೇವಕ, ಉದ್ಯಮಿ ಹರ್ನಿಶ್ ರಾಜ್ ಉಪಸ್ಥಿತರಿದ್ದರು.