ಉಡುಪಿ, ಸೆ. 12 :ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಸೆ.10, ಬುಧವಾರ ಮಲ್ಪೆ ಲೈಟ್ಹೌಸ್ ಬಳಿ ಸಂಭವಿಸಿದೆ.
ಮೃತರನ್ನು ಸಾಸ್ತಾನ ಕೋಡಿತಲೆ ನಿವಾಸಿ ಸ್ಥಳೀಯ ಮೀನುಗಾರ ರಾಮ ಖಾರ್ವಿ ಎಂದು ಗುರುತಿಸಲಾಗಿದೆ.
ಮೀನುಗಾರ ರಾಮ ಖಾರ್ವಿ ಅವರು ಎಂದಿನಂತೆ ಬುಧವಾರ ಕೂಡ ಮೀನುಗಾರಿಕೆಗೆ ತೆರೆಳಿದ್ದ ಸಂದರ್ಭ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಈಜಲು ಆಗದೆ ನೀರಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.
ರಾಮ ಖಾರ್ವಿ ಅವರು ಮದ್ಯಾಹ್ನವಾದರೂ ಮನೆಗೆ ಬಾರದಿದ್ದ ಕಾರಣ ಅವರ ಮಗ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದರು. ಆದರೆ ಅವರೊಂದಿಗೆ ಸಂಪರ್ಕ ವಾಗದ ಕಾರಣ ಮಲ್ಪೆಗೆ ಸಂಬಂಧಿಕರೊಂದಿಗೆ ಸ್ನೇಹಿತರೊಂದಿಗೆ ಸೇರಿ ತಡರಾತ್ರಿಯವರೆಗೆ ಹುಡುಕಾಟ ಮಾಡಿದ್ದರು. ಆದರೆ ಗುರುವಾರ ಮಲ್ಪೆ ಲೈಟ್ ಹೌಸ್ ಬಳಿ ರಾಮ ಖಾರ್ವಿ ಅವರ ಮೃತದೇಹ ಪತ್ತೆಯಾಗಿದೆ.
ಬಲವಾದ ಅಲೆಗಳ ರಭಸಕ್ಕೆ ಅವರ ದೋಣಿ ಉರುಳಿಬಿದ್ದು, ಸುರಕ್ಷಿತವಾಗಿ ಈಜಲು ಸಾಧ್ಯವಾಗದ ಕಾರಣ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ದೋಣಿ, ಎಂಜಿನ್, ಬಲೆಗಳು ಮತ್ತು ಇತರ ಉಪಕರಣಗಳು ಸಂಪೂರ್ಣವಾಗಿ ಹಾನಿಗೊಂಡಿವೆ ಎಂದು ಮೂಲಗ ಳು ತಿಳಿಸಿವೆ.