ಉರ್ವ, ಸೆ. 25: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317 ಡಿ ವತಿಯಿಂದ ಲಯನ್ಸ್ ಸದಸ್ಯರು ಮತ್ತು ಆಯ್ದ ಹುಲಿ ವೇಷ ತಂಡಗಳಿಂದ ಸಿಂಹದ ಕಲೊಟು ಪಿಲಿ ಗೊಬ್ಬು 3ನೇ ಆವೃತ್ತಿ ಸೆ. 27, ಶನಿವಾರ ಸಂಜೆ 5 ಗಂಟೆಯಿಂದ ಕದ್ರಿ ಮೈದಾನದಲ್ಲಿ ನಡೆಯಲಿದೆ ಎಂದು ಲಯನ್ಸ್ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ್ ಪಡಿಯಾರ್ ಅವರು ಬುಧವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 4 ಗಂಟೆಗೆ ನಗರದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಿಂದ ಕದ್ರಿ ಬಯಲು ರಂಗಮಂಟಪಕ್ಕೆ ಹುಲಿ ವೇಷ ಕುಣಿತಗಳ ಭವ್ಯ ಮೆರವಣಿಗೆ ಬರಲಿದೆ. ಸಂಜೆ 5 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ.ನವರಾತ್ರಿಯ ಸಮಯ ಆಗಿರುವುದರಿಂದ ಹುಲಿವೇಷಕ್ಕೆ ಸಂಬಂಧಪಟ್ಟ ಒಂಭತ್ತು ಮಂದಿ ಆಯ್ದ ದಿಗ್ಗಜರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಗುವುದು ಎಂದರು.
ಲಯನ್ಸ್ ಜಿಲ್ಲಾ 317 ಇದರ ಗವರ್ನರ್ ಅರವಿಂದ ಶೆಣೈ ಮತ್ತು ಮಮತಾ ಶೆಣೈ ದಂಪತಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಮುಖ್ಯಸ್ಥ ಡಾ| ಮೋಹನ ಆಳ್ವ ಅತಿಥಿಗಳಾಗಿ ವಿ.ವಿ. ಕೃಷ್ಣ ರೆಡ್ಡಿ, ಸಂಜಿತ್ ಶೆಟ್ಟಿ ಮೋಹನ್ ಕುಮಾರ್, ಶಾಸಕ ಡಿ. ವೇದವ್ಯಾಸ ಕಾಮತ್, ಸದಾನಂದ ಶೆಟ್ಟಿ ಮನೋಹರ ಶೆಟ್ಟಿ ನಿಹಾಲ್ ತಾವೋ ಭಾಗವಹಿಸಲಿರುವರು ಎಂದು ತಿಳಿಸಿದರು.
ನಿಕಟಪೂರ್ವ ಗವರ್ನರ್ ಬಿ.ಎಂ. ಭಾರತಿ, ತಾರನಾಥ್ ಕೊಪ್ಪ ಗೋವರ್ಧನ್ ಶೆಟ್ಟಿ ಶುಭಹಾರೈಸುವರು. ಸಭಾ ಕಾರ್ಯಕ್ರಮದ ಬಳಿಕ ಲಯನ್ಸ್ ಮತ್ತು ಲಿಯೋ ಸದಸ್ಯರು, ಆಯ್ದ ಹುಲಿವೇಷದ ತಂಡಗಳಿಂದ ಹುಲಿ ವೇಷದ ಕುಣಿತ ನಡೆಯಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಜ್ಯೋತಿ ಶ್ರೀಧರ ಶೆಟ್ಟಿ ಗಣೇಶ್ ಶೆಟ್ಟಿ, ನಿಖಿಲ್ ಶೆಟ್ಟಿ, ಲೋಕೇಶ್, ಮನೋರಂಜನ್,ಸುಜಿತ್ ಕುಮಾರ್ ಉಪಸ್ಥಿತರಿದ್ದರು.