ಮಂಗಳೂರು ,ಸೆ. 26 : ರಾಮಕ್ಷತ್ರಿಯ ಸೇವಾ ಸಂಘ ಮಂಗಳೂರು ವತಿಯಿಂದ ಸೆ. 28 ಆದಿತ್ಯವಾರ ಬೆಳಿಗ್ಗೆ 10ಕ್ಕೆ ನಗರದ ಮೋರ್ಗನ್ಸ್‌ಗೇಟ್ನ ಪಾಲೆಮಾರ್ ಗಾರ್ಡನ್ ಸಭಾಂಗಣದಲ್ಲಿ ‘ಅಭಿನಂದನಾ ಸಮಾರಂಭ’ ಕಾರ್ಯಕ್ರಮ ನಡೆಯಲಿದೆ ಎಂದು ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷರಾದ ಮುರಳಿ ಅವರು ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಮಕ್ಷತ್ರಿಯ ಸೇವಾ ಸಂಘವು ಸಮಾಜಮುಖಿ ಚಟುವಟಿಕೆಗಳ ಮೂಲಕ ವೈದ್ಯಕೀಯ ಸಹಾಯ, ವಿದ್ಯಾದಾನ, ರಕ್ತದಾನ, ಪ್ರತಿಭಾ ಪುರಸ್ಕಾರ ಮತ್ತು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ಬಾರಿ ನಮ್ಮ ಸಮುದಾಯ ಮತ್ತು ಇತರ ಸಮುದಾಯದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸುವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಶಾಸ್ತ್ರವಿಭಾಗ ಮುಖ್ಯಸ್ಥ ರಾಮಕ್ಷತ್ರಿಯ ಸಮಾಜದ ಡಾ. ಎಚ್. ಪ್ರಭಾಕರ, ಜಿಲ್ಲಾ ವೆನ್ಹಾಲ್ ಆಸ್ಪತ್ರೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಭಾರತೀಯ ವೈದ್ಯಕೀಯ ಸಂಘದ ಡಾ.ಬಿ.ಸಿ. ರಾಯ್ ಸ್ಮಾರಕ ರಾಷ್ಟ್ರೀಯ ಸಮುದಾಯ ಸೇವಾ ಪುರಸ್ಕಾರ ಪಡೆದ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ಳೂರು, ಅಂತಾರಾಷ್ಟ್ರೀಯ ಕ್ರೀಡಾಪಟು ನಾಗಶ್ರೀ ಗಣೇಶ ಶೇರುಗಾರ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ ಬ್ರಿಜೇಶ್ ಚೌಟ, ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ. ಶಾಂತರಾಮ ಶೆಟ್ಟಿ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಉಮಾನಾಥ ಎ. ಕೋಟ್ಯಾನ್ ಅತಿಥಿಯಾಗಿ ಭಾಗವಹಿಸುವರು. ಬೆಳಗ್ಗೆ 9ರಿಂದ 10ರವರೆಗೆ ‘ಯಕ್ಷ ತೆಲಿಕೆ’ ಹಾಸ್ಯ ರಸಧಾರೆ ಕಾರ್ಯಕ್ರಮ, ಡಾ. ಶಿವಾನಂದ ಬೇಕಲ್ ಅವರ ‘ಒಗಟಿನ ಮನೆ’ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್, ಸಂಘದ ಗೌರವಾಧ್ಯಕ್ಷ ರವೀಂದ್ರ ಕೆ., ಕಾರ್ಯದರ್ಶಿ ರವೀಂದ್ರ, ಕೋಶಾಧಿಕಾರಿ ದಿನೇಶ್ ಕುಮಾರ್ ಬೇಕಲ್ ಉಪಸ್ಥಿತರಿದ್ದರು.