ಉಳ್ಳಾಲ, ಅ. 12: ಉಳ್ಳಾಲದ ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿ ಸಮೀಪದ ಉಚ್ಚಿಲ ಜಂಕ್ಷನ್ ಬಳಿಯ ಗುಜರಿ ಅಂಗಡಿಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಭಾನುವಾರ ಮಧ್ಯಾಹ್ನ ಸಂಭವಿಸಿದ ಈ ಘಟನೆಯಿಂದ ಗುಜರಿ ಅಂಗಡಿಯಲ್ಲಿ ಇರಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗುಜರಿ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ವರದಿಯಾಗಿದೆ.
ಉಚ್ಚಿಲದ ಅಂಡರ್ ಪಾಸ್ ಬಳಿಯ ಇಕ್ಬಾಲ್ ಹಾಗೂ ಇಬ್ರಾಹಿಂ ಎಂಬವರಿಗೆ ಸೇರಿದ ಗುಜರಿ ಅಂಗಡಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವಾಗಲೇ ಬೆಂಕಿ ಕಾಣಿಸಿಕೊಂಡಿದೆ. ಮೊದಲು ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಬಳಿಕ ಅಗ್ನಿ ಶಾಮಕದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ.
ಘಟನೆ ನಡೆದ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.