ಮಂಗಳೂರು,ಡಿ.24 : ಕ್ಯಾ.ಬ್ರಿಜೇಶ್ ಚೌಟ ನೇತ್ರತ್ವದಲ್ಲಿ 9ನೇ ವರ್ಷದ ರಾಮ – ಲಕ್ಷ್ಮಣ ಜೋಡುಕರೆ ಕಂಬಳ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಡಿ. 27 ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ದ.ಕ ಜಿಲ್ಲೆಯ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
![]()
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 27 ರಂದು ಬೆಳಗ್ಗೆ 8 ಗಂಟೆಗೆ ಕಂಬಳದ ಉದ್ಘಾಟನೆ ನಡೆಯಲಿದ್ದು ಉದ್ಘಾಟನೆಯನ್ನು ಗರೋಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಮೊಕ್ತೇಸರರಾದ ಚಿತ್ತರಂಜನ್ ಅವರು ದೀಪ ಬೆಳಗಿಸುವ ಮೂಲಕ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೆಂದ್ರ ಸಹಿತ ಶಾಸಕರು, ಸಾಮಾಜಿಕ,ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮ ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು , ಬಹುಮಾನ ವಿತರಣೆ ರವಿವಾರ ಬೆಳಗ್ಗೆ ನಡೆಯಲಿದೆ ಎಂದರು.
ನಗರದಲ್ಲಿ ನೆಲೆಸಿರುವ ದೇಶ ವಿದೇಶದ ಮಕ್ಕಳಿಗೆ ತುಳುನಾಡಿನ ಸಂಸ್ಕೃತಿಯ ಪರಿಚಯ ಆಗಬೇಕು ಎಂಬ ನಿಟ್ಟಿನಲ್ಲಿ ಪ್ರಾರಂಭಗೊಂಡ ಕಂಬಳ 9ನೇ ವರ್ಷಕ್ಕೆ ಕಾಲಿಟ್ಟಿದ್ದು ಸಂತಸದ ವಿಚಾರವಾಗಿದೆ. ನಗರ ಪ್ರದೇಶದಲ್ಲಿ ನೆಲೆಸಿರುವ ಜನರಿಗೆ ನಮ್ಮ ತುಳುನಾಡಿನ ಕಂಬಳದ ಪರಿಚಯವಾಗಬೇಕು ಎಂದು ವಿಶೇಷವಾಗಿ ಈ ಬಾರಿ 9 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತುಳುನಾಡಿನ ಹೆಮ್ಮೆಯ ರಾಣಿ ಅಬ್ಬಕ್ಕ ಚಿತ್ರಕಲಾ ಸ್ಪರ್ಧೆಯನ್ನು ಮಕ್ಕಳಿಗಾಗಿ ಆಯೋಜಿಸಲಾಗಿದೆ.ವಂದೇ ಮಾತರಂ 150ನೇ ವರ್ಷ ಆಚರಣೆಯ ನಿಮಿತ್ತ ಕಂಬಳದಲ್ಲಿ ವಂದೇ ಮಾತರಂ ಗಾಯನ ಮತ್ತು 150 ವಿದ್ಯಾರ್ಥಿನಿಯರಿಂದ ಸಾಮೂಹಿಕ ವಂದೇ ಮಾತರಂ ಗಾಯನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನವ ಸಂಕಲ್ಪಗಳಲ್ಲಿ ಒಂದಾಗಿರುವ ‘ಏಕ್ ಪೇಡ್ ಮಾ ಕೆ ನಾಮ್ ತಾಯಿಯ ಹೆಸರಿನಲ್ಲಿ ಒಂದು ಗಿಡ’ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.ಬ್ಯಾಕ್ ಟು ಊರು ಅಭಿಯಾನದಡಿ 9 ಮಂದಿಯನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ವಿಶೇಷ ಸಾಮರ್ಥ್ಯ ಹಾಗೂ ಓಲ್ಡ್ ಏಜ್ಡ್ ಹೋಮ್‌ನಲ್ಲಿ ನೆಲೆಸಿರುವ ಮಂಗಳೂರು ನಗರ ಪರಿಸರದ ನಿವಾಸಿಗಳನ್ನು ಕರೆತಂದು ಕಂಬಳ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು. ರಂಗ್ದ ಕೂಟ ಹೆಸರಿನಲ್ಲಿ ಚಿತ್ರಕಲಾ ಸ್ಪರ್ಧೆಯು ರಂಗ್ದ ಕಿನ್ಯ, ರಂಗ್ದ ಎಲ್ಯ, ರಂಗ್ದ ಮಲ್ಲ ಹಾಗೂ ರಂಗ್ದ ಕೂಟ ವಿಭಾಗಗಳಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30 ತನಕ ನಡೆಯಲಿದೆ. ಮಂಗಳೂರು ಕಂಬಳದ ಕ್ಷಣಗಳನ್ನು ರೀಲ್ಸ್ ಮಾಡುವ ಮೂಲಕ ಅತೀ ಹೆಚ್ಚು ವೀಕ್ಷಣೆ ಪಡೆಯುವ ರೀಲ್ಸ್ಗೆ ಬಹುಮಾನವನ್ನು ನೀಡಲಾಗುವುದು. ಮಂಗಳೂರು ಕಂಬಳ ಫೋಟೋಗ್ರಾಫಿ ಸ್ಪರ್ಧೆ ಆಯೋಜನೆ ಮಾಡಲಾಗಿದ್ದು, ನುರಿತ ತೀರ್ಪುಗಾರರ ಮೂಲಕ ಆಯ್ಕೆಯಾದ ಚಿತ್ರಕ್ಕೆ ನಗದು ಬಹುಮಾನ ನೀಡಲಾಗುವುದು.ಕೃತಕ ಬುದ್ಧಿಮತ್ತೆ (ಎಐ) ಉಪಯೋಗಿಸಿ ಮಂಗಳೂರು ಕಂಬಳ ಕಲಾಕೃತಿಯ ರಚಿಸುವ ಸ್ಪರ್ಧೆ ನಡೆಯಲಿದ್ದು ಉತ್ತಮ ಕಲಾಕೃತಿಗೆ ಬಹುಮಾನ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ, ಸಂಚಾಲಕ ಸಾಂತ್ಯಗುತ್ತು ಸಚಿನ್ ಶೆಟ್ಟಿ,ಪ್ರಮುಖರಾದ ಸಂಜಯ ಪ್ರಭು, ಪ್ರಸಾದ್ ಕುಮಾರ್ ಶೆಟ್ಟಿ ವಿಜಯಕುಮಾರ್ ಕೆಂಗಿನ ಮನೆ, ಜೋಯ್ಲಸ್ ಡಿ ಸೋಜ, ಕಿರಣ್ ಕುಮಾರ್ ಕೋಡಿಕಲ್, ವಸಂತ ಜೆ ಪೂಜಾರಿ, ಅವಿನಾಶ್ ಸುವರ್ಣ, ಬಟ್ಟಿರ ಅಜಿತ್ ಭೋಪಯ್ಯ, ಈಶ್ವರ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.











