ಮಂಗಳೂರು, ಡಿ. 25 : ಎಂ.ಆರ್.ಜಿ. ಗ್ರೂಪ್ ನ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಪ್ರದಾನ ಸಮಾರಂಭ ‘ನೆರವು-2025’ ಗುರುವಾರ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಎಂ.ಆರ್.ಜಿ.ಗ್ರೂಪಿನ ಚೇರ್ಮನ್ ಡಾ.ಪ್ರಕಾಶ್ ಶೆಟ್ಟಿ ಅವರು, ನಾನು 2019ರಲ್ಲಿ ನನ್ನ ಆತ್ಮೀಯರು ಹೇಳಿದ್ದಕ್ಕೆ ಧ್ವನಿಗೂಡಿಸಿ ನೆರವು ಯೋಜನೆ ಪ್ರಾರಂಭಿಸಿದೆ. ಏಳು ಜಿಲ್ಲೆಗಳ ಫಲಾನುಭವಿಗಳಿಗೆ ಇಂದು ನೀಡುತ್ತಿರುವ ಆರ್ಥಿಕ ಸಹಾಯದ ಸದುಪಯೋಗವಾಗಬೇಕು.ಮಕ್ಕಳು ಇದರ ಪ್ರಯೋಜನ ಪಡೆದುಕೊಂಡು ಸಮಾಜದಲ್ಲಿ ಎತ್ತರದ ಸ್ಥಾನಕ್ಕೇರಬೇಕು. ಮುಂದೆ ನನ್ನಂತೆ ಸಮಾಜದ ನೊಂದವರ ಶೋಷಿತರ ಪರ ನೀವೆಲ್ಲರೂ ನಿಲ್ಲಬೇಕು ಎಂದರು.
ಈ ವರ್ಷ ನೆರವು ಯೋಜನೆ ಏಳನೇ ವರ್ಷವನ್ನು ಪೂರೈಸುತ್ತಿದೆ. ಇನ್ನು ಮೂರು ವರ್ಷಗಳ ಕಾಲ ಯೋಜನೆ ಮುಂದುವರಿಯುತ್ತದೆ. ದಶಮಾನೋತ್ಸವ ಬಳಿಕ ‘ನೆರವು’ ಯೋಜನೆಯ ಫಲಾನುಭವಿಗಳನ್ನು ಸೇರಿಸಿಕೊಂಡು ಅದಕ್ಕೊಂದು ಸಾಮೂಹಿಕ ರೂಪ ಕೊಡುವ ಚಿಂತನೆ ಇದೆ.ಈ ಯೋಜನೆಯನ್ನು ಆರಂಭ ಮಾಡಿದ ಮೊದಲ ವರ್ಷ ಒಟ್ಟು 1.25 ಕೋ.ರೂ. ನೆರವು ವಿತರಿಸಿದ್ದೇವೆ. ಆಗ 28 ಸಂಘ ಸಂಸ್ಥೆಗಳು ಪ್ರಯೋಜನ ಪಡೆದಿವೆ. ಈಗ 7ನೇ ವರ್ಷದಲ್ಲಿ 100ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ನೆರವು ವಿತರಣೆಯಾಗಲಿದೆ ಎಂದರು.
ಬಳಿಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಮಾತಾಡಿ, ಎಂ.ಆರ್.ಜಿ. ಗ್ರೂಪ್ ಪ್ರಕಾಶ್ ಶೆಟ್ಟಿಯವರು ಒಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದೆ. ಪ್ರಕಾಶ್ ಶೆಟ್ಟಿಯವರ ಸಹಾಯ ವಿತರಣಾ ಕಾರ್ಯಕ್ರಮ ನಮಗೆಲ್ಲರಿಗೂ ಆದರ್ಶವಾಗಬೇಕು. ಮಾನವೀಯ ಮೌಲ್ಯಗಳನ್ನು ಇಂದಿನ ಯುವಪೀಳಿಗೆ ಮತ್ತು ಮುಂದಿನ ಸಮುದಾಯಕ್ಕೆ ವರ್ಗಾಯಿಸುವ ಬಲುದೊಡ್ಡ ಜವಾಬ್ದಾರಿ ನಮ್ಮೆಲ್ಲರದ್ದಾಗಬೇಕು. ಸಾಮರಸ್ಯ ಮತ್ತು ಶಾಂತಿಯುತ ಸಮಾಜದ ನಿರ್ಮಾಣವಾಗಬೇಕು ಇದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಆಶಾ ಪ್ರಕಾಶ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮೂಡಬಿದ್ರೆಯ ಅಳ್ವಾಸ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಮೋಹನ್ ಆಳ್ವ, ಎಂ.ಆರ್.ಜಿ.ಗ್ರೂಪ್ ಆಡಳಿತ ನಿರ್ದೇಶಕ ಗೌರವ್ ಪಿ.ಶೆಟ್ಟಿ ವೇದಿಕೆಯಲ್ಲಿದ್ದರು.











