ಬೆಂಗಳೂರು, ಫೆ. 18 : ಸೆಂಟ್ ಜೋಸೆಫ್ ವಿಶ್ವವಿದ್ಯಾಲಯವು ತನ್ನ ಮೊಟ್ಟಮೊದಲ ವಿದ್ಯಾರ್ಥಿವೇತನ ದಿನಾಚರಣೆಯಾದ “ರೂಟ್ಸ್ ಟು ವಿಂಗ್ಸ್” ಅನ್ನು ಶುಕ್ರವಾರದಂದು ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮರ್ಕ್ ಕೆಜಿಎಎ ಸಂಸ್ಥೆಯ ಆರ್ ಅಂಡ್ ಡಿ ವಿಭಾಗದ ಮುಖ್ಯಸ್ಥರಾದ ಡಾ. ಮಾರ್ಕಸ್ ಓಬ್ಕಿರ್ಚರ್ ಅವರು ಮಾತನಾಡುತ್ತಾ, ವಿದ್ಯಾರ್ಥಿವೇತನವು ವಿದ್ಯಾರ್ಥಿಗಳ ಮೇಲಿಟ್ಟಿರುವ ನಂಬಿಕೆಯಾಗಿದ್ದು, ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಯಿಂದ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರೆ. ಫಾದರ್ ಡಯೋನಿಶಿಯಸ್ ವಾಜ್ ಅವರು ಅಧ್ಯಕ್ಷೀಯ ಭಾಷಣ ದಲ್ಲಿ, ವಿದ್ಯಾರ್ಥಿಗಳನ್ನು ಮೌಲ್ಯಾಧಾರಿತ ಶಿಕ್ಷಣದ ಮೂಲಕ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದು ಸಂಸ್ಥೆಯ ಧ್ಯೇಯ ವಾಗಿದೆ ಎಂದು ಹೇಳಿದರು.
ಕುಲಪತಿಗಳಾದ ಡಾ. ಫಾದರ್ ವಿಕ್ಟರ್ ಲೋಬೋ ಅವರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಸಂಚಾಲಕರು ಹಾಗೂ ಹಣಕಾಸು ಅಧಿಕಾರಿಗಳಾದ ಫಾದರ್ ಅರುಣ್ ಪ್ರಶಾಂತ್ ಡಿಸೋಜಾ ಅವರು ವಂದನಾರ್ಪಣೆ ಸಲ್ಲಿಸಿದರು.
ಈ ವಿಶೇಷ ದಿನದಂದು ವಿವಿಧ ವರ್ಗಗಳ ಅಡಿಯಲ್ಲಿ ಒಟ್ಟು 4,50,00,000 ರೂಪಾಯಿಗಳ ಬೃಹತ್ ಮೊತ್ತದ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲಾಯಿತು. ಇದರಲ್ಲಿ ಆರ್ಥಿಕ ನೆರವಿನ ಅಡಿಯಲ್ಲಿ 1,290 ವಿದ್ಯಾರ್ಥಿಗಳಿಗೆ 2,54,20,550 ರೂಪಾಯಿಗಳನ್ನು ಹಾಗೂ ಶೈಕ್ಷಣಿಕ ಶ್ರೇಷ್ಠತೆಯ ಅಡಿಯಲ್ಲಿ 760 ವಿದ್ಯಾರ್ಥಿಗಳಿಗೆ 1,80,79,450 ರೂಪಾಯಿಗಳನ್ನು ನೀಡಲಾಯಿತು. ಅಲ್ಲದೆ, 50 ವಿದ್ಯಾರ್ಥಿಗಳಿಗೆ 15,00,000 ರೂಪಾಯಿಗಳ ಮ್ಯಾಜಿಸ್ ಮತ್ತು ವಿಶೇಷ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.











