ಬ್ರಹ್ಮಾವರ, ಮಾ. 15 : ನಾಯಿ ಅಡ್ಡ ಬಂದ ಪರಿಣಾಮ ರಿಕ್ಷಾವೊಂದು ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ಉಡುಪಿ ಬ್ರಹ್ಮಾವರದ ಹೆಗ್ಗುಂಜೆ ಗ್ರಾಮದ ಮೈರ್‌ಕೋಮೆ ಹಾಲ್ ಡೈರಿ ಬಳಿ ಮಾ.13, ಶುಕ್ರವಾರ ನಡೆದಿದೆ.
ಮೃತರನ್ನು ರಿಕ್ಷಾ ಚಾಲಕ ನರಸಿಂಹ ಪೂಜಾರಿ ಎಂದು ಗುರುತಿಸಲಾಗಿದೆ.
ಮಾ.13ರಂದು ಮಧ್ಯಾಹ್ನ ವೇಳೆ ಶಿರೂರು ಮೂರು ಕೈ ಕಡೆಯಿಂದ ಕೊಕ್ಕರ್ಣೆ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ನಾಯಿ ಅಡ್ಡ ಬಂದಿದ್ದು, ಚಾಲಕ ನರಸಿಂಹ ಪೂಜಾರಿ ರಿಕ್ಷಾವನ್ನು ಒಮ್ಮೆಲೆ ಎಡಕ್ಕೆ ಚಲಾಯಿಸಿದ್ದರಿಂದ, ರಿಕ್ಷಾದ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದಿದೆ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮಾ.14ರಂದು ಮೃತಪಟ್ಟರು ಎಂದು ವರದಿಯಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










