ಮಂಗಳೂರು,ಏ. 05 : ಕರಾವಳಿಯಲ್ಲಿ ಕ್ರೈಸ್ತರು ಈಸ್ಟರ್ ಹಬ್ಬವನ್ನುಸಂಭ್ರಮದಿಂದ ಆಚರಿಸಿದರು. ಶನಿವಾರ ರಾತ್ರಿ ಈಸ್ಟರ್ ಈವ್ ಆಚರಿಸಿದ್ದು, ರವಿವಾರ ಯೇಸು ಕ್ರಿಸ್ತರ ಪುನರುತ್ಥಾನ ಸ್ಮರಣೆಯ ಈಸ್ಟರ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಶನಿವಾರ ರಾತ್ರಿ ಚರ್ಚ್ಗಳಲ್ಲಿ ಈಸ್ಟರ್ ಜಾಗರಣೆಯ ಬಲಿಪೂಜೆಗಳು ನಡೆದವು.
ಶನಿವಾರ ಸಂಜೆ ಬೆಂಕಿ ಆಶೀರ್ವಚನ, ಮೆರವಣಿಗೆ, ಪಾಸ್ಕಾ ಗಾಯನ ನಡೆಯಿತು. ಹಳೆ ಹಾಗೂ ಹೊಸ ಒಡಂಬಡಿಕೆಗಳಿಂದ ದೇವರ ವಾಕ್ಯ ವಾಚನ ಹಾಗೂ ಗಾಯನ ನಡೆಸಲಾಯಿತು. ಧರ್ಮಗುರುಗಳು ಪುನರುತ್ಥಾನದ ಸಂದೇಶದೊಂದಿಗೆ ಪ್ರವಚನ ನೀಡಿದರು. ವಿವಿಧ ಸಂಸ್ಕಾರಗಳಿಗೆ ಬಳಸುವ ಪವಿತ್ರ ಜಲದ ಆಶೀರ್ವಾದ ನಡೆಸಿ, ದೀಕ್ಷಾಸ್ನಾನದ ಪ್ರತಿಜ್ಞೆ ನವೀಕರಿಸಲಾಯಿತು.
ಮಂಗಳೂರು ಕೆಥೋಲಿಕ ಧರ್ಮ ಪ್ರಾಂತದ ಬಂಟ್ವಾಳ, ಮಂಗಳೂರು, ಪುತ್ತೂರು, ಸುರತ್ಕಲ್, ಕಾಸರಗೋಡು, ವಿಟ್ಲ, ಮುಡಿಪು, ಬೆಳ್ತಂಗಡಿ ವಲಯಗಳಲ್ಲಿ ಈಸ್ಟರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಪ್ರೊಟೆಂಸ್ಟಂಟ್, ಇತರ ಧರ್ಮ ಸಭೆ ವ್ಯಾಪ್ತಿಯಲ್ಲೂ ಈಸ್ಟರ್ ಹಬ್ಬದ ಆಚರಣೆಗಳು ನಡೆದವು.
ಮಂಗಳೂರಿನ ಬಿಷಪ್ ಅ| ವಂ| ಡಾ| ಪೀಟರ್ಪಾವ್ ಸಲ್ದಾನ್ಹಾ ಅವರು ರೊಸಾರಿಯೋ ಕೆಥೆಡ್ರಲ್ನಲ್ಲಿ ಪುನರುತ್ಥಾನದ ಬಲಿಪೂಜೆ ನೆರವೇರಿಸಿದರು. ಚರ್ಚ್ನ ಪ್ರಧಾನ ಧರ್ಮಗುರು ವಂ| ವಲೇರಿಯನ್ ಡಿ’ಸೋಜಾ ಸಹಿತ ಇತರ ಧರ್ಮಗುರುಗಳು ಇದ್ದರು. ರವಿವಾರ ಬಿಷಪ್ ಅವರು ಈಸ್ಟರ್ ಹಬ್ಬದ ಬಲಿಪೂಜೆಯನ್ನು ಕೊಡಿಯಾಲ್ಬೈಲ್ ಬಿಷಪ್ ನಿವಾಸದಲ್ಲಿ ಬೆಳಗ್ಗೆ ನೆರವೇರಿಸಿದರು.











