ಮಂಗಳೂರು, ಮೇ o7: : ಮೊಗೇರ ಸಂಘ (ರಿ) ಮಂಗಳೂರು ತಾಲೂಕು ಇದರ ನೇತೃತ್ವದಲ್ಲಿ ನಗರದ ಕೂಳೂರು ಪಂಜಿಮೊಗರುವಿನ ಮುಖ್ಯ ರಸ್ತೆಯ ಪಕ್ಕದಲ್ಲಿ ನಿರ್ಮಾಣಗೊಂಡಿರುವ “ಮೊಗೇರ ಸೌಧ” ಬಹುಮಹಡಿಗಳ ಕಟ್ಟಡವು 2026 ಮೇ 10 ರಂದು ಉದ್ಘಾಟನೆಗೊಳ್ಳಲಿದೆ ಎಂದು ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷರಾದ ಸೀತಾರಾಮ ಕೊಂಬಾಡಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭದಲ್ಲಿ ಸಮಾಜ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದು, ಸಮುದಾಯ ಭವನದ ಉದ್ಘಾಟನೆಯನ್ನು ವಿಧಾನ ಸಭೆಯ ಸ್ಪೀಕರ್ ಯು.ಟಿ ಖಾದರ್, ಮೊಗೇರ ಸೌಧ ಬಹುಮಹಡಿ ಕಟ್ಟಡ ಸಂಕೀರ್ಣದ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ವಿದ್ಯಾರ್ಥಿ ನಿಲಯದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಬ್ರಿಜೇಶ್ ಚೌಟ, ಸ್ವ ಉದ್ಯೋಗ ತರಬೇತಿ ಕೇಂದ್ರದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ನಾರಾಯಣ ಸ್ವಾಮಿ. ಸಂಘದ ನೂತನ ಕಚೇರಿಯ ಉದ್ಘಾಟನೆಯನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರೂ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಡಾ|ಭರತ್ ಶೆಟ್ಟಿ ವೈ, ಸ್ಮರಣ ಸಂಚಿಕೆ ಬಿಡುಗಡೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಎಸ್.ಅಂಗಾರ, ಮೊಗೇರ ಜಾತಿ ಸಮೀಕ್ಷೆ ಆ್ಯಪ್ ಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವ ಇವರು ಚಾಲನೆಯನ್ನು ನೀಡಲಿರುವರು ಎಂದರು.
ಅಂದು ಬೆಳಗ್ಗೆ 9.30 ಗಂಟೆಗೆ ಸರಿಯಾಗಿ ಕೂಳೂರು ಜಂಕ್ಷನ್ನಿಂದ ಪಂಜಿಮೊಗರುವಿನಲ್ಲಿರುವ ಮೊಗೇರ ಸೌಧದ ವರೆಗೆ ವಿವಿಧ ವೇಷಭೂಷಣ, ತಾಲೀಮ್ ಪ್ರದರ್ಶನ, ಕುಣಿತ ಭಜನೆಗಳ ಮೂಲಕ ವರ್ಣರಂಜಿತ ಮೆರವಣಿಗೆಯು ನಡೆದು ಬಳಿಕ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳ ನಡೆಯಲಿರುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಸುಂದರ ಮೇರ. ಮೊಗೇರ ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಯಪ್ಪ ಎಸ್, ಕೋಶಾಧಿಕಾರಿ ನಾರಾಯಣ ಉಳ್ಳಾಲ್, ಮೊಗೇರ ಸಂಘದ ಉಪಾಧ್ಯಕ್ಷರಾದ ಗೋಪಾಲ ಕೃಷ್ಣಾಪುರ, ದಲಿತ ಮುಖಂಡರಾದ ಅಶೋಕ್ ಕೊಂಚಾಡಿ, ರಾಮ ಕೊಳಂಬೆ ಮತ್ತಿತರರು ಉಪಸ್ಥಿತರಿದ್ದರು.











