ಮಂಗಳೂರು, ಮೇ 15: ಪತ್ರಕರ್ತ, ಸಾಹಿತಿ ರೇಮಂಡ್ ಡಿಕುನ್ಹಾ ತಾಕೋಡೆ ಅವರು ಬರೆದಿರುವ, ಕನ್ನಡ ಮತ್ತು ದೇವನಾಗರಿ ಲಿಪಿಯಲ್ಲಿರುವ ಕೊಂಕಣಿ ಕವನಗಳ ಸಂಕಲನ ‘ಚುನ್ಯಾಚೊ ಫೊಂಡ್’ ಕೃತಿಯು ಪತ್ರಿಕಾಭವನದಲ್ಲಿ ಗುರುವಾರ ಬಿಡುಗಡೆಗೊಂಡಿತು.
ಸಮಾಜ ಸೇವಕ ಮೈಕಲ್ ಡಿಸೋಜಾ ಕೃತಿ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ, ವಿಷನ್ ಕೊಂಕಣ ಸಂಸ್ಥೆಯ ಮುಖಾಂತರ ಮಾತಭಾಷೆಯಲ್ಲಿ ಕೃತಿ ಪ್ರಕಟಿಸುವ ಬರೆಹಗಾರರ ಪುಸ್ತಕವನ್ನು ಮುದ್ರಣ ಮಾಡಲು ಸಹಾಯ ಮಾಡುತ್ತಿದ್ದೇನೆ. ಈಗ ಬಿಡುಗಡೆಗೊಂಡಿರುವ ಪುಸ್ತಕ ಸಂಸ್ಥೆಯ 42ನೇ ಪುಸ್ತಕವಾಗಿದೆ. ಮುಂದಿನ 5 ವರ್ಷಗಳಲ್ಲಿ 100 ಪುಸ್ತಕಗಳನ್ನು ಹೊರತರುವ ಗುರಿ ಹೊಂದಲಾಗಿದೆ. ಕೃತಿಯನ್ನು ರಚಿಸಿ ಅದನ್ನು ಮುದ್ರಿಸಲು ಅನುದಾನದ ಕೊರತೆ ಎದುರಿಸುತ್ತಿರುವ ಕೃತಿಕಾರರಿಗೆ ಸಹಾಯ ಮಾಡಲು ವಿಷನ್ ಕೊಂಕಣಿ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು.
ವಿಷನ್ ಕೊಂಕಣಿ ಮುಖ್ಯಸ್ಥ ಮುಖ್ಯಸ್ಥ ಹೆನ್ರಿ ಮೆಂಡೋನ್ಸಾ ಪೆರ್ನಾಲ್ ಮಾತನಾಡಿ, ಮೈಕಲ್ ಡಿಸೋಜ ಅವರು ತಮ್ಮ ವಿಷನ್ ಕೊಂಕಣಿ ಮೂಲಕ ಸಾಹಿತಿಗಳಿಗೆ ಸಹಾಯ ಮಾಡುತ್ತಿದ್ದಾರೆ. 40 ಲಕ್ಷಕ್ಕೂ ಮಿಕ್ಕಿದ ನೆರವಿನ ಪಂಚವಾರ್ಷಿಕ ಯೋಜನೆ ಇದಾಗಿದೆ. ನಮ್ಮಲ್ಲಿ ಪುಸ್ತಕ ಪ್ರಕಟಿಸುವವರು ಪುಸ್ತಕದ ಕರಡು ಪ್ರತಿ ಹಾಗೂ ಪಿಡಿಎಫ್ ಪ್ರತಿಯನ್ನು ಕಳುಹಿಸಿದರೆ ಆಯ್ಕೆ ಸಮಿತಿ ವತಿಯಿಂದ ಪರಾಮರ್ಶಿಸಿ ಪುಸ್ತಕ ಮುದ್ರಿಸಿಕೊಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೃತಿಕಾರ ರೇಮಂಡ್ ಡಿಕುನಾ ತಾಕೊಡೆ, ಮೈಕಲ್ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು. ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ಮೆಲ್ವಿನ್ ರೊಡ್ರಿಗಸ್, ಟೈಟಸ್ ನೊರೊನ್ಹಾ ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಎನ್. ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಉಪಸ್ಥಿತರಿದ್ದರು. ಭಾಸ್ಕರ ರೈ ಕಟ್ಟ ನಿರೂಪಿಸಿದರು. ರಿಯಾನಾ ಡಿಕುನ್ಹಾ ವಂದಿಸಿದರು.











