ಬೈಂದೂರು, ಜೂ. 02 : ಪ್ರವಾಸಕ್ಕೆಂದು ತೆರಳಿದ್ದ ಹಾವೇರಿ ಮೂಲದ ವಿದ್ಯಾರ್ಥಿಯೊಬ್ಬ ನದಿಯಲ್ಲಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೋಮವಾರ ಶಿರೂರು ಸಂಕದಗುಂಡಿ ಹೊಳೆಯಲ್ಲಿ ನಡೆದಿದೆ.
ಮೃತರನ್ನು ಹಾವೇರಿ ಸಮೀಪದ ಕೃಷಿ ನಗರದ ನಿವಾಸಿ ಆಯುಷ್ (16) ಎಂದು ಗುರುತಿಸಲಾಗಿದೆ.
ಹಾವೇರಿ ಸಮೀಪದ ಕೃಷಿ ನಗರದಿಂದ ಒಟ್ಟು 7 ಮಂದಿ ಮುರುಡೇಶ್ವರ, ಕನ್ಯಾಕುಮಾರಿ ಪ್ರವಾಸಕ್ಕೆ ತೆರಳಿದ್ದರು. ಮುರುಡೇಶ್ವರ ಪ್ರವಾಸ ಮುಗಿಸಿ ಶಿರೂರು ಸಂಕದಗುಂಡಿ ಹೊಳೆಯ ಬಳಿ ಅವರು ವಿಶ್ರಾಂತಿ ಪಡೆಯಲು ನಿಲ್ಲಿಸಿದ್ದ ಸಂದರ್ಭದಲ್ಲಿ ಮನೆಯವರೆಲ್ಲಾ ಊಟದ ತಯಾರಿಯಲ್ಲಿರುವ ವೇಳೆ ಇಬ್ಬರು ಮಕ್ಕಳು ಪಕ್ಕದಲ್ಲಿರುವ ನದಿಗೆ ಸ್ನಾನಕ್ಕೆ ತೆರಳಿದ್ದರು.
ನದಿಯ ಆಳ ಇರುವ ಜಾಗದಲ್ಲಿ ಈಜಲು ತೆರಳಿದ ಕಾರಣ ನೀರಿನ ಆಳ ತಿಳಿಯದೆ ಆಯುಷ್ ಮುಳುಗಿದ್ದಾನೆ ಎನ್ನಲಾಗಿದೆ. ತಕ್ಷಣ ಇನ್ನೊಬ್ಬ ಸಹೋದರ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಆದರೆ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ನದಿ ಆಳ ಇರುವ ಕಾರಣ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸುಮಾರು ಒಂದು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.











