ಮಂಗಳೂರು,ಆ.28: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಬೆಳೆಸುವ ಉದ್ದೇಶದಿಂದ ಕಲ್ಕೂರ ಪ್ರತಿಷ್ಠಾನ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆ ಸೆಪ್ಟೆಂಬರ್ 4ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 44 ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿರುವ ಈ ಮಕ್ಕಳ ಉತ್ಸವದಲ್ಲಿ ಈ ಬಾರಿ ಒಟ್ಟು 44 ವಿಭಾಗಗಳಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. 12 ವೇದಿಕೆಗಳಲ್ಲಿ ಏಕಕಾಲದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಬೆಳಿಗ್ಗೆ 9ರಿಂದ ರಾತ್ರಿ 12 ಗಂಟೆಯವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸೆ.4ರಂದು ಬೆಳಗ್ಗೆ 9 ಗಂಟೆಗೆ ಶ್ರೀಕೃಷ್ಣ ವರ್ಣ ವೈಭವ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಮಹಿಳೆಯರು ಸಾಂಪ್ರದಾಯಿಕವಾಗಿ ಹಾಡುಗಳನ್ನು ಹಾಡುತ್ತಾ ಕಡಗೋಲಿನಿಂದ ಮೊಸರು ಕಡೆದು ಬೆಣ್ಣೆ ತೆಗೆಯುವ ಕಾರ್ಯಕ್ರಮ ಆಯೋಜಿಸಲಾಗಿದೆ. ಮಧ್ಯಾಹ್ನ 12ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಮಧ್ಯಾಹ್ನ 1 ಗಂಟೆಗೆ ನಂದಗೋಕುಲ ವೇದಿಕೆಯಲ್ಲಿ ಗಣ್ಯರು, ಪುಟಾಣಿ ಕೃಷ್ಣರು ಹಾಗೂ ಮಾತೆಯರ ಸಮ್ಮುಖದಲ್ಲಿ ಶ್ರೀಕೃಷ್ಣ ಜನ್ಮ ಮಹೋತ್ಸವಕ್ಕೆ ದೀಪ ಪ್ರಜ್ವಲನದ ಮೂಲಕ ಚಾಲನೆ ನೀಡಲಾಗುವುದು. ಇದೇ ಸಂದರ್ಭದಲ್ಲಿ ಆರು ತಿಂಗಳೊಳಗಿನ ಕಂದಮ್ಮಗಳನ್ನು ಮಹಿಳೆಯರು ಸಾಂಪ್ರದಾಯಿಕ ಶೈಲಿಯಲ್ಲಿ ತೊಟ್ಟಿಲಿಗೆ ಹಾಕಿ ಜೋಗುಳ ಹಾಡುವ ವಿಶೇಷ ಕಾರ್ಯಕ್ರಮವೂ ನಡೆಯಲಿದೆ ಎಂದರು.
ತೊಟ್ಟಿಲ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಗೀತಾ ಕೃಷ್ಣ, ರಾಧಾಕೃಷ್ಣ, ಯಶೋದ ಕೃಷ್ಣ, ದೇವಕಿ ಕೃಷ್ಣ, ವಸುದೇವ ಕೃಷ್ಣ, ಯಕ್ಷ ಕೃಷ್ಣ ಹಾಗೂ ಕೃಷ್ಣ-ಕುಚೇಲ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.
ಆಗಸ್ಟ್ 30ರಂದು ಬೆಳಿಗ್ಗೆ 9ರಿಂದ ಶಾರದಾ ವಿದ್ಯಾಲಯ, ಕೊಡಿಯಾಲ್‌ಬೈಲ್‌ನಲ್ಲಿ ವಿದ್ಯಾರ್ಥಿಗಳಿಗಾಗಿ ಶ್ರೀ ಕೃಷ್ಣ ಗಾನ , ರಂಗೋಲಿಯಲ್ಲಿ ಕೃಷ್ಣ , ಕೃಷ್ಣ ಕಥಾ ಸ್ಪರ್ಧೆಗಳು ಪೂರ್ವಭಾವಿಯಾಗಿ ನಡೆಯಲಿದೆ . ಆನ್ಲೈನ್ ವಿಭಾಗದಲ್ಲಿ ವೃಕ್ಷ ಕೃಷ್ಣ , ಗೋಪಾಲ ಕೃಷ್ಣ , ಕೃಷ್ಣ ರೀಲ್ಸ್ ಸ್ಪರ್ಧೆಗಳು ನಡೆಯಲಿದೆ. ಸ್ಪರ್ಧೆಯ ಪ್ರತಿ ವಿಭಾಗದ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು ಎಂದರು.
ಬೆಳಿಗ್ಗೆ 9ರಿಂದ ರಾತ್ರಿ 12ರವರೆಗೆ ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಸ್ಪರ್ಧೆಗಳಲ್ಲಿ ಭಾಗವಹಿಸಲು ಸ್ಥಳದಲ್ಲಿಯೇ ಹೆಸರು ನೋಂದಾಯಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಕಲ್ಕೂರ ಪ್ರತಿಷ್ಠಾನದ ಕಚೇರಿ 0824-2492239, 9448125949, 9845083736 ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಪ್ರಮುಖರಾದ ಪ್ರಭಾಕರ ಜೋಶಿ, ನವನೀತ ಶೆಟ್ಟಿ ಕದ್ರಿ, ಶಿವಪ್ರಸಾದ್, ಪೂರ್ಣಿಮಾ, ವಿಜಯಲಕ್ಷ್ಮಿ, ತಾರಾನಾಥ ಶೆಟ್ಟಿ ಬೋಳಾರ, ದಯಾನಂದ ಕಟೀಲ್, ಸುಧಾಕರ್ ರಾವ್ ಪೇಜಾವರ , ಶ್ರೀಮತಿ ಮಂಜುಳಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.











