ಕಠ್ಮಂಡು : ನಾಲ್ವರು ಭಾರತೀಯರು ಸೇರಿದಂತೆ ಒಟ್ಟು 22 ಜನರಿದ್ದ ವಿಮಾನವು ನೇಪಾಳದ ಪರ್ವತದ ಮೇಲೆ ಅಪ್ಪಳಿಸಿ ನಡೆದ ಅಪಘಾತದಲ್ಲಿ14 ಜನ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ವಿಮಾನದಿಂದ ಹದಿನಾಲ್ಕು ಶವಗಳನ್ನು ಹೊರತೆಗೆಯಲಾಗಿದ್ದು ಶೋಧ ಕಾರ್ಯಚರಣೆ ಮುಂದುವರಿದಿದೆ ಎಂದು ವಕ್ತಾರ ದಿಯೋ ಚಂದ್ರ ಲಾಲ್ ಕರ್ನ್ ತಿಳಿಸಿದ್ದಾರೆ.
22 ಮಂದಿ ಪ್ರಯಾಣಿಕರನ್ನು ಹೊತ್ತೊಯ್ದಿದ್ದ ವಿಮಾನ ಸೋಮವಾರ ಪತ್ತೆಯಾಗಿದೆ ಎಂದು ನೇಪಾಳ ಸೇನೆ ತಿಳಿಸಿದೆ. ವಾಯುವ್ಯ ನೇಪಾಳದ ಮಸ್ಟಾಂಗ್ ಜಿಲ್ಲೆಯ ತಾಸಾಂಗ್ ನ ಸಾನೊ ಸ್ವಾರೆ ಭೀರ್ ಎಂಬಲ್ಲಿ 14,500 ಅಡಿ ಎತ್ತರದಲ್ಲಿ ವಿಮಾನ ಕಣ್ಮರೆಯಾದ ಸುಮಾರು 20 ಗಂಟೆಗಳ ನಂತರ ಅಪಘಾತದ ಸ್ಥಳ ಪತ್ತೆಯಾಗಿದೆ.
ಟ್ವಿನ್ ಓಟರ್ 9ಎನ್-ಎಇಟಿ ವಿಮಾನವು ರವಿವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಪ್ರವಾಸಿ ನಗರವಾದ ಪೋಖರಾದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲಿ ಸಂಪರ್ಕವನ್ನು ಕಳೆದುಕೊಂಡಿತ್ತು. ಅನಂತರ ವಾಯುವ್ಯ ನೇಪಾಳದ ಮಸ್ಟಾಂಗ್ ಜಿಲ್ಲೆಯ ತಾಸಾಂಗ್ ನ ಸಾನೊ ಸ್ವಾರೆ ಭೀರ್ ಎಂಬಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ