ಮಂಗಳೂರು,ಮೇ.22 : ಬಜ್ಪೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ದುರಂತಕ್ಕೆ 14 ವರ್ಷ ಕಳೆದಿವೆ. ಈ ಘಟನೆಯಲ್ಲಿ ಮಡಿದವರಿಗೆ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
2010ರ ಮೇ 22ರಂದು ದುಬೈನಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಹಂತದಲ್ಲಿ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 166 ಜನರ ಪೈಕಿ 158 ಜನರು ಸಾವನಪ್ಪಿದ್ದರು. 8 ಜನರು ಬದುಕುಳಿದಿದ್ದರು. ವಿಮಾನ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಗುರುತು ಹಿಡಿಯಲಾಗದ 12 ಮಂದಿಯ ಮೃತದೇಹಗಳನ್ನು ಕುಳೂರಿನ ನದಿ ಕಿನಾರೆಯಲ್ಲಿ ಸಮಾಧಿ ಮಾಡಲಾಗಿತ್ತು. ಅದೇ ಜಾಗದಲ್ಲಿ ದುರಂತದಲ್ಲಿ ಮಡಿದವರ ನೆನಪಿಗಾಗಿ ಪಾರ್ಕ್ ನಿರ್ಮಾಣ ಮಾಡಲಾಗಿದೆ.
ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜಿಲ್ಲಾ ಪೊಲೀಸ್ ಅಧಿಕಾರಿಗಳು, ವಿಮಾನ ನಿಲ್ದಾಣದ ಅಧಿಕಾರಿಗಳು ಸೇರಿದಂತೆ ಮಡಿದವರ ಕುಟುಂಬಸ್ಥರು ಭಾಗವಹಿಸಿದರು.