ಧರ್ಮಸ್ಥಳ,ನ.15 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸದಸ್ಯರಿಗೆ 605 ಕೋಟಿ ರೂ ಲಾಭಾಂಶ ವಿತರಣಾ ಕಾರ್ಯಕ್ರಮ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಹಿಂದೆ ಗ್ರಾಮೀಣಾಭಿವೃದ್ಧಿ ಎಂಬುದು ಕಲ್ಯಾಣ ಕಾರ್ಯಕ್ರಮಕ್ಕೆ ಸೀಮಿತ ಆಗಿತ್ತು. ಸರ್ಕಾರ ಸ್ವಸಹಾಯ ಗುಂಪುಗಳಿಗೆ ಹಣಕಾಸಿನ ನೆರವು ನೀಡುತ್ತಿತ್ತು. ಅವರು ಅದನ್ನು ಸಣ್ಣ ಪುಟ್ಟ ಉದ್ದೇಶಗಳಿಗೆ ಬಳಸುತ್ತಿದ್ದರು. ಆದರೆ, ಈಗ ಗ್ರಾಮೀಣಾಭಿವೃದ್ಧಿಯ ಪರಿಕಲ್ಪನೆ ಬದಲಾಗಿದೆ. ಈಗ ಕಲ್ಯಾಣ ಕಾರ್ಯಕ್ರಮದ ಮೂಲಕ ಮಹಿಳೆಯರೂ ಸ್ವಾವಲಂಬಿಗಳಾಗುತ್ತಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರ ಹಾಗೂ ಸ್ವಸಹಾಯ ಸಂಘಗಳೆರಡರ ಪಾತ್ರವೂ ಇದೆ. ದೇಶದ ಜನರ ಸಬಲೀಕರಣವೇ ಬಡತನ ನಿರ್ಮೂಲನೆಯ ಸಾಧನ. ಈ ಸಬಲೀಕರಣವು ಜನರಿಗೆ ಹಣ ಗಳಿಸುವುದಕ್ಕೆ, ಸ್ವಂತ ನಿರ್ಧಾರ ತಳೆಯುವುದಕ್ಕೆ, ಅವಕಾಶಗಳನ್ನು ಕಲ್ಪಿಸುತ್ತಿದೆ. ಅವರೂ ಡಿಜಿಟಲ್ ಮಾರುಕಟ್ಟೆಯನ್ನು ಬಳಸಿಕೊಳ್ಳಲು ಮತ್ತು ವಹಿವಾಟಿನ ಹಣವನ್ನು ಡಿಜಿಟಲ್ ರೂಪದಲ್ಲೇ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ದೇಶದಲ್ಲಿ ನಬಾರ್ಡ್, ಎಸ್ ಕೆಡಿಆರ್ ಡಿಪಿ ಕಾರ್ಯಕ್ರಮಗಳು ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಗ್ರಾಮೀಣ ಅಭಿವೃದ್ಧಿಯಲ್ಲಿ ಮಹಿಳಾ ಭಾಗವಹಿಸುವಿಕೆ ಹೆಚ್ಚಿದೆ.ಹಳ್ಳಿಯ ಹೆಣ್ಣುಮಕ್ಕಳೂ 15 ಲಕ್ಷದವರೆಗೂ ಸಾಲ ಪಡೆಯುತ್ತಿದ್ದಾರೆ. ಹಳ್ಳಿಯ ಹೆಣ್ಣು ಮಕ್ಕಳು ಕಂಪ್ಯೂಟರ್ ಕಲಿತಿದ್ದಾರೆ. ಮೊಬೈಲ್ ನಲ್ಲಿ ವಿವರ ಅಪ್ಲೋಡ್ ಮಾಡುತ್ತಾರೆ. ಅಕ್ಷರ ಕಲಿಯದವರೂ ನೋಟುಗಳನ್ನು ಸರಿಯಾಗಿ ಎಣಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬೆಳ್ತಂಗಡಿಯ ಧನ್ಯಶ್ರೀ ಸಂಘ, ಕುಂದಾಪುರದ ಶ್ರೀನಿಧಿ ಸಂಘ, ಹೊಸಪೇಟೆಯ ಶ್ರೀಶಂಕರ ಸಂಘ, ಆನೇಕಲ್ ನ ಅಪೂರ್ವ ಸಂಘ, ಖಾನಾಪುರದ ಅಹದ್ ಸಂಘ, ಹಾಸನದ ರೋಶನ್ ಸಂಘಗಳ ಸದಸ್ಯರಿಗೆ ಲಾಭಾಂಶದ ಚೆಕ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ.ಹೆಗ್ಗಡೆ ಉಪಸ್ಥಿತರಿದ್ದರು.
ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್ ಸ್ವಾಗತಿಸಿದರು. ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ಧನ್ಯವಾದ ಸಮರ್ಪಿಸಿದರು.