ಸುರತ್ಕಲ್ ,ಡಿ.21 : ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರೊಬ್ಬರನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬೆನ್ನು ಹತ್ತಿದ ವೇಳೆ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ಸುರತ್ಕಲ್ ನ ಕಾನ ಕುಳಾಯಿ ಗುಡ್ಡೆ ಜಂಕ್ಷನ್ನಲ್ಲಿ ಶುಕ್ರವಾರ ನಡೆದಿದೆ. ಕಾನ ನಿವಾಸಿ ರೆಮ್ಮಿ (38) ಮೃತರು.
ರೆಮ್ಮಿ ತನ್ನ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ವೇಳೆ ಕುಳಾಯಿಗುಡ್ಡೆ ಜಂಕ್ಷನ್ ಬಳಿ ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸರು ರೆಮ್ಮಿಯನ್ನು ಬೆನ್ನಟ್ಟಿ ಹಿಡಿಯಲು ಮುಂದಾಗಿದ್ದು, ಈ ವೇಳೆ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನೆ ಸಂಭವಿಸುತ್ತಿದ್ದಂತೆ ದ್ವಿಚಕ್ರ ವಾಹನ ಬೆನ್ನಟ್ಟಿದ್ದ ಪೊಲೀಸ್ ಸಿಬ್ಬಂದಿ ಬಸ್ ಹತ್ತಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.