ಮಂಗಳೂರು, ಜ. 5 : ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ, ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಬಿಜಿಎಸ್ ಪಿಯು ಕಾಲೇಜು ಕಟ್ಟಡ ಉದ್ಘಾಟನೆ, ಬಿಜಿಎಸ್ ಸುವರ್ಣ ಭವನ ಶಂಕುಸ್ಥಾಪನೆ ಕಾರ್ಯಕ್ರಮ ಕಾವೂರು ಬಿಜಿಎಸ್ ಪಿಯು ಕಾಲೇಜು ಆವರಣದಲ್ಲಿ ಗುರುವಾರ ಜರಗಿತು.
ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಡಾ| ನಿರ್ಮಲಾನಂದನಾಥ ಸ್ವಾಮೀಜಿ ಅವರು, ಶಾಖಾ ಮಠಗಳು ಆರಂಭವಾಗಲು ಭಕ್ತರು ಕಾರಣ. ಮಂಗಳೂರಿನ ಕಾವೂರಿನಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಮಠವನ್ನು ಶ್ರೀ ಡಾ| ಧರ್ಮಪಾಲನಾಥ ಸ್ವಾಮೀಜಿಯವರು 25 ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ್ದಾರೆ ಎಂದರು.
ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವಪ್ರಹ್ಲಾದ್ ಜೋಷಿ ಅವರು ಮಾತನಾಡಿ, ಮಕ್ಕಳಿಗೆ ಧರ್ಮ, ಅಧ್ಯಾತ್ಮ ಸಂಸ್ಕಾರ, ಪೂಜಾ ಪದ್ಧತಿಗಳನ್ನು ತಿಳಿಸಬೇಕು, ಈ ಕಾರ್ಯವನ್ನು ಆದಿಚುಂಚನಗಿರಿ ಮಠ ಮಾಡುತ್ತಿದೆ ಎಂದು ಹೇಳಿದರು.
ಚಿತ್ರದುರ್ಗ ಶಿವ ಶರಣ ಮಾದಾರ ಚನ್ನಯ್ಯ ಗುರು ಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಬೆಳಗಾವಿ ಹುಕ್ಕೇರಿ ಹಿರೇಮಠದ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ|ನಿರ್ಮಲಾನಂದನಾಥಸ್ವಾಮೀಜಿ ಅವರಿಗೆ ರಜತ ತುಲಾಭಾರ ನೆರವೇರಿತು. ಡಾ| ಧರ್ಮಪಾಲನಾಥ ಸ್ವಾಮೀಜಿ ಅವರ ಪಿಎಚ್ ಡಿ ಪ್ರಬಂಧದ ಇಂಗ್ಲಿಷ್ ಅನುವಾದ ಪುಸ್ತಕ ಬಿಡುಗಡೆ ಮಾಡಲಾಯಿತು.
ಮಂಗಳೂರು ಶಾಖಾ ಮಠದ ಡಾ| ಧರ್ಮಪಾಲನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಗಳ ಯತಿಗಳು ಸಾನಿಧ್ಯ ವಹಿಸಿದ್ದರು. ಶಾಸಕ ಡಾ| ವೈ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಜಿಎಸ್ ಕರಾವಳಿ ಕಲ್ಪತರು ಸ್ಮರಣ ಸಂಚಿಕೆಯನ್ನು ಸಂಸದ ಕ್ಯಾ| ಬ್ರಿಜೇಶ್ ಚೌಟ ಬಿಡುಗಡೆ ಗೊಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಮೇಯರ್ ಮನೋಜ್ ಕುಮಾರ್, ಶಾಸಕರಾದ ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ರವಿಕುಮಾರ್, ಎಸ್ಪಿ ಯತೀಶ್, ಶ್ರೀ ಆದಿಚುಂಚನಗರಿ ವಿಶ್ವವಿದ್ಯಾಲಯ ಉಪಕುಲಪತಿ ಡಾ|ಎಂ.ಎ.ಶೇಖರ್,ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮುಖ್ಯ ಕಾರನಿರ್ವಹಣಾಧಿಕಾರಿ ಡಾ| ಎನ್. ಎಸ್. ರಾಮೇಗೌಡ ಉಪಸ್ಥಿತರಿದ್ದರು. ರಜತ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಪಿ.ಎಸ್.ಪ್ರಕಾಶ್ ಪ್ರಸ್ತಾವಿಸಿ, ಕಾರ್ಯಾಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿ,ಪ್ರಶಾಂತ್ ಪೈ ವಂದಿಸಿದರು.