ಬಂಟ್ವಾಳ, ಜ.8: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇದರ ಕಲ್ಲಡ್ಕ ಶಾಲೆಯು ವಿನೂತನ ಸೌಲಭ್ಯದೊಂದಿಗೆ ಮುಖ್ಯರಸ್ತೆಯಲ್ಲಿರುವ ಕಾವೇರಿ ಸಂಕೀರ್ಣದ ನೆಲ ಅಂತಸ್ತಿಗೆ ಸೋಮವಾರ ಸ್ಥಳಾಂತರಗೊಂಡಿತು. ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು ದೀಪ ಬೆಳಗಿಸುವ ಮೂಲಕ ಶಾಖೆಯನ್ನು ಉದ್ಘಾಟಿಸಿದರು.
ಬಳಿಕ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು, ನಮ್ಮ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಜಿಲ್ಲೆಯಾಗಿದೆ. ನಮ್ಮ ಜಿಲ್ಲೆಯಲ್ಲಿ ಶೇ 100ರಷ್ಟು ಕೃಷಿ ಸಾಲ ಮರುಪಾವತಿಯಾಗುತ್ತಿದೆ. ಮಹಿಳೆಯರ ಸ್ವಾವಲಂಬನೆಗಾಗಿ ನಮ್ಮ ಬ್ಯಾಂಕ್ ಪ್ರಾಮಾಣಿಕ ಪ್ರಯತ್ನ ಪಡುತ್ತಿದೆ. ಮಹಿಳೆಯರು ನಮ್ಮ ಬ್ಯಾಂಕ್ ನಿಂದ ಲೋನ್ ಪಡೆದು ಪುರುಷರಿಗೆ ಸರಿಸಮಾನವಾಗಿ ಬೆಳೆದಿದ್ದಾರೆ. ಆರ್ಥಿಕವಾಗಿ ಸಶಕ್ತರಾಗಿ ಸ್ವಾವಲಂಬನೆಯ ಜೀವನ ಸಾಗಿಸುತ್ತಿದ್ದಾರೆ. ಬ್ಯಾಂಕ್ ನಲ್ಲಿ ಗ್ರಾಹಕರಿಗೆ ವಿನೂತನ ಸೇವೆಯನ್ನು ಒದಗಿಸುವ ದೃಷ್ಟಿಯಿಂದ ಹೊಸ ಶಾಖೆಗೆ ಸ್ಥಳಾಂತರ ಮಾಡಲಾಗಿದೆ ಎಂದರು.
ಮಾಜಿ ಶಾಸಕ ರುಕ್ಮಯ ಪೂಜಾರಿ ಮಾತಾಡಿ, ಬೆಳೆಯುತ್ತಿರುವ ಕಲ್ಲಡ್ಕದಲ್ಲಿ ಇಂತಹ ಗ್ರಾಹಕ ಸ್ನೇಹಿಯಾದ ಸುಸಜ್ಜಿತ ಬ್ಯಾಂಕ್ ನ ಅವಶ್ಯಕತೆ ಇತ್ತು. ಗ್ರಾಹಕರು ಬ್ಯಾಂಕ್ ನ ಎಲ್ಲ ಸೇವೆಯನ್ನು ಬಳಸಬಹುದು ಎಂದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತಾಡಿ, ಕಲ್ಲಡ್ಕ ಬೆಳೆಯುತ್ತಿದೆ. ಕಲ್ಲಡ್ಕದಲ್ಲಿ ಪ್ರಾರಂಭಗೊಂಡಿರುವ ನೂತನ ಶಾಖೆ ಇನ್ನಷ್ಟು ಅಭಿವೃದ್ಧಿಗೊಳ್ಳಲಿ. ಆ ಮೂಲಕ ಕಲ್ಲಡ್ಕಕ್ಕೆ ಇನ್ನಷ್ಟು ಒಳ್ಳೆಯ ಹೆಸರು ಬರಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಶಾಖಾ ಕಟ್ಟಡದ ಮಾಲಕ ವರದರಾಯ ಪ್ರಭು, ಬ್ಯಾಂಕ್ ನಿರ್ದೇಶಕರಾದ ವಿನಯ್ ಕುಮಾರ್ ಸೂರಿಂಜೆ, ಜಯರಾಮ್ ರೈ, ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬೊಳ್ಯೊಟ್ಟು, ಪ್ರಧಾನ ಕಾರ್ಯ ನಿರ್ವಹಣಾಧಿಕಾರಿ ಗೋಪಿನಾಥ್ ಭಟ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾಂಕಿನ ಹಿರಿಯ ನಿರ್ದೇಶಕರಾದ ಟಿ.ಜಿ.ರಾಜಾರಾಮ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.