ಮಂಗಳೂರು ಜ.26 : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಬುಧವಾರ ಪತ್ರಿಕಾ ಭವನದಲ್ಲಿ ಗೌರವ ಅತಿಥಿ ಸನ್ಮಾನ ಸ್ವೀಕರಿಸಿ ಮಾತಾನಾಡಿದ ಮಾಜಿ ಸಚಿವ,ಲ್ಯಾಂಡ್‌ಲಿಂಕ್ಸ್ ಸಂಸ್ಥೆಯ ಸಿಇಒ ಕೃಷ್ಣ ಜೆ. ಪಾಲೆಮಾರ್ ಅವರು ನನ್ನ ಉದ್ದಿಮೆಯಲ್ಲಿ ಮೂರು ಬಾರಿ ಸಂಪೂರ್ಣವಾಗಿ ಸೋತಿದ್ದೇನೆ. ಆದರೆ ಮುಂದೆ ಇದರಿಂದ ಹೊರಬರಲಿದ್ದೇನೆ ಎಂಬ ಆತ್ಮವಿಶ್ವಾಸದೊಂದಿಗೆ ಸವಾಲನ್ನು ಸ್ವೀಕರಿಸಿ ಮುಂದೆ ಬಂದಿದ್ದೇನೆ. ಹಾಗಾಗಿ ಜೀವನದಲ್ಲಿ ಎದುರಾಗುವ ಸೋಲು ಹಾಗೂ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಶಾಲೆಗೆ ಹೋಗುತ್ತಿದ್ದ ಸಂದರ್ಭ ಮೋರ್ಗನ್ಸ್‌ಗೇಟ್ನ ಗೇರುಬೀಜ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ತಾನು ಮುಂದೊಂದು ದಿನ ಆ ಇಡೀ ಆಸ್ತಿಯನ್ನೇ ಖರೀದಿಸುವಷ್ಟು ಶಕ್ತನಾಗುತ್ತೇನೆಂಬ ಕನಸು ಕಂಡಿರಲಿಲ್ಲ. ಆದರೆ ಅದು ಇಂದು ಸಾಧ್ಯವಾಗಿದೆ ಎಂದವರು ಹೇಳಿದರು.
ಸಣ್ಣ ಪುಟ್ಟ ವ್ಯವಹಾರ ನಡೆಸುತ್ತಿದ್ದ ಸಂದರ್ಭ ರಿಯಲ್ ಎಸ್ಟೇಟ್ ಆರಂಭಿಸಿದಾಗ ಸಿ.ಎಲ್. ಡಿಸೋಜಾ ಎಂಬವರು ಗಾಡ್‌ಫಾದರ್ ಆಗಿ ಬೆಂಬಲ ನೀಡಿದ ಕಾರಣ ವ್ಯವಹಾರದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡ ಕೃಷ್ಣ ಪಾಲೆಮಾರ್, ಜಿಲ್ಲಾ ಉಸ್ತುವಾರಿ, ಬಂದರು ಇಲಾಖೆ, ಪರಿಸರ ಇಲಾಖೆಯ ಸಚಿವನಾಗಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ಇದೆ ಎಂದರು.
ನಮ್ಮ ಕುಡ್ಲ ವಾಹಿನಿ ಸಿಇಒ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ , ಕೆ.ಆನಂದ ಶೆಟ್ಟಿ, ಅನ್ನು ಮಂಗಳೂರು . ಮಹಮ್ಮದ್ ಆರಿಫ್ ಪಡುಬಿದ್ರಿ, ವಿಲ್ಫ್ರೆಡ್ ಡಿಸೋಜಾ ಉಪಸ್ಥಿತರಿದ್ದರು. ಅತ್ಮಭೂಷಣ್ ಭಟ್ ಕಾರ್ಯಕ್ರಮ ನಿರೂಪಿಸಿದರು.