ಬೆಂಗಳೂರು,ಫೆ.15 : ಕಲರ್ಸ್ ಕನ್ನಡ ಟಿವಿ ಚಾನೆಲ್ ಎರಡು ಹೊಸ ರಿಯಾಲಿಟಿ ಶೋಗಳನ್ನು ಶುರುಮಾಡುತ್ತಿದೆ. ‘ಬಾಯ್ಸ್ V/S ಗರ್ಲ್ಸ್’ ಎಂಬ ಗೇಮ್ ಶೋ ಮತ್ತು ನಕ್ಕು ನಗಿಸುವ ‘ಮಜಾ ಟಾಕೀಸ್’ ಶೋಗಳು ಫೆಬ್ರವರಿ 1ರಿಂದ ಪ್ರಸಾರ ಆರಂಭಿಸಲಿವೆ. ಪ್ರತಿ ಶನಿವಾರ ಮತ್ತು ಭಾನುವಾರ ಏಳೂವರೆಗೆ ‘ಬಾಯ್ಸ್ V/S ಗರ್ಲ್ಸ್’ ಹಾಗೂ 9 ಗಂಟೆಗೆ ʼಮಜಾ ಟಾಕೀಸ್ʼ ಕಾರ್ಯಕ್ರಮಗಳು ನಿಮ್ಮನ್ನು ರಂಜಿಸಲಿವೆ.
ಬಾಯ್ಸ್ V/S ಗರ್ಲ್ಸ್ :-
ಹೊಸ ರೀತಿಯ ರಿಯಾಲಿಟಿ ಶೋಗಳಿಗೆ ಹೆಸರಾಗಿರುವ ಕಲರ್ಸ್ ಕನ್ನಡ ಶುರುಮಾಡುತ್ತಿರುವ ‘ಬಾಯ್ಸ್ V/S ಗರ್ಲ್ಸ್’ ಕನ್ನಡ ಕಿರುತೆರೆಗೆ ಹೊಸದೆನಿಸುವ ಥ್ರಿಲ್ ಅನ್ನು ಹೊತ್ತು ತರಲಿದೆ. ಬಾಯ್ಸ್ ತಂಡವನ್ನು ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಮುನ್ನಡೆಸಿದರೆ, ಹುಡುಗಿಯರ ಗುಂಪಿನ ನಾಯಕಿ ನಟಿ ಶುಭಾ ಪೂಂಜಾ. ಇನ್ನು ಸ್ಪರ್ಧಿಗಳ ಪಟ್ಟಿಯೂ ಅಷ್ಟೇ ರೋಚಕವಾಗಿದೆ. ಈಗಷ್ಟೇ ಬಿಗ್ ಬಾಸ್ ಗೆದ್ದಿರುವ ಹನುಮಂತ ಲಮಾಣಿ, ಬಿಗ್ ಬಾಸ್ ಧನರಾಜ್ ಆಚಾರ್, ಐಶ್ವರ್ಯಾ ಶಿಂದೊಗಿ, ಶೋಭಾ ಶೆಟ್ಟಿ, ಚೈತ್ರಾ ಕುಂದಾಪುರ ಮತ್ತು ರಜತ್ ಕೂಡ ಇಲ್ಲಿ ಇರುತ್ತಾರೆ. ಜೊತೆಗೆ ಕಿರುತೆರೆಯ ಮುಖಗಳಾದ ಪ್ರಶಾಂತ್, ಮಂಜು ಪಾವಗಡ, ನಿವೇದಿತಾ ಗೌಡ, ಸೂರಜ್, ವಿಶ್ವಾಸ್, ಸ್ನೇಹಿತ್, ವಿವೇಕ್ ಸಿಂಹ, ರಕ್ಷಿತ್, ಚಂದನ, ರಮ್ಯ, ಪ್ರಿಯಾ ಸವಡಿ, ಸ್ಪಂದನಾ ಮತ್ತು ಐಶ್ವರ್ಯಾ ವಿನಯ್ ಕೂಡ ಆಟದಲ್ಲಿ ಇರಲಿದ್ದಾರೆ.
ಶೋನ ಉದ್ದಕ್ಕೂ ಸ್ಪರ್ಧಿಗಳಿಗೆ ರೋಚಕ ಸವಾಲುಗಳಿರುತ್ತವೆ. ಹುಡುಗ ಹುಡುಗಿಯರು ತಮ್ಮ ಚಾಕಚಕ್ಯತೆ, ಸೃಜನಶೀಲತೆ ಮತ್ತು ಒಟ್ಟಾಗಿ ಆಡುವ ಮನೋಭಾವದಿಂದ ಈ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಗೇಮುಗಳ ಜೊತೆಗೆ ನೃತ್ಯ ಸೇರಿದಂತೆ ಉಳಿದ ಟಾಸ್ಕುಗಳೂ ಇಲ್ಲಿರುತ್ತವೆ.
ಇವೆಲ್ಲದರ ಜೊತೆಗೆ ಹಳ್ಳಿ ಸೆಟಪ್, ಕಾಲೇಜ್ ಸೆಟಪ್ ನಂಥ ಮೋಜಿನ ಥೀಮುಗಳೂ ನಿಮ್ಮನ್ನು ಈ ಶೋನಲ್ಲಿ ಇರಲಿವೆ. ಚುರುಕು ಬುದ್ಧಿ ಹಾಗೂ ದೈಹಿಕ ಶಕ್ತಿಗಳೆರಡನ್ನೂ ಒಟ್ಟಿಗೆ ಪರೀಕ್ಷೆಗೊಳಪಡಿಸುವ ‘ಬಾಯ್ಸ್ V/S ಗರ್ಲ್ಸ್’ ನ ಪ್ರತಿ ಸಂಚಿಕೆಯನ್ನೂ ವೀಕ್ಷಕರನ್ನು ತುದಿಗಾಲಲ್ಲಿ ಕೂರಿಸಲು ತಕ್ಕಂತೆ ರೂಪಿಸಲಾಗಿದೆ.
‘ಬಾಯ್ಸ್ V/S ಗರ್ಲ್ಸ್’ ಶೋನ ನಿರೂಪಣೆಯ ಹೊಣೆ ಹೊತ್ತಿರುವುದು ಚೈತನ್ಯದ ಚಿಲುಮೆ ಅನುಪಮಾ ಗೌಡ. ವಿನೂತನ ಫಾರ್ಮ್ಯಾಟ್ ಮತ್ತು ವಿಭಿನ್ನ ಸವಾಲುಗಳಿಂದ ಸಿದ್ಧಗೊಂಡಿದೆ ‘ಬಾಯ್ಸ್ V/S ಗರ್ಲ್ಸ್’.
ಮಜಾ ಟಾಕೀಸ್ :-
ಸೃಜನ್ ಲೋಕೇಶ್ ಸಾರಥ್ಯದಲ್ಲಿ ಈಗಾಗಲೇ ಮೂರು ಯಶಸ್ವೀ ಸೀಸನ್ನುಗಳನ್ನು ಮುಗಿಸಿರುವ ‘ಮಜಾ ಟಾಕೀಸ್’ ಇದೀಗ ಮತ್ತೊಂದು ಹೊಸ ಸೀಸನ್ ಗೆ ತಯಾರಾಗಿದೆ. ಸೃಜನ್ ಈ ಹೊಸ ಸೀಸನ್ನಿಗೆ ಹಲವು ಹೊಸ ಸಂಗತಿಗಳನ್ನು ಸೇರಿಸಿ ಎಲ್ಲ ವಯಸ್ಸಿನ ವೀಕ್ಷಕರನ್ನೂ ರಂಜಿಸಲಿವೆ.
ಮಜಾ ಮನೆಗೆ ಈ ಸಲ ಹೊಸ ಅತಿಥಿಗಳ ದಂಡೇ ಬಂದಿಳಿದಿದೆ. ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿರುವ ನಿರ್ದೇಶಕ ಯೋಗರಾಜ ಭಟ್ರು ತಮ್ಮದೇ ಶೈಲಿಯ ಹುಡುಗಾಟಿಕೆಯನ್ನು ತಂದಿದ್ದಾರೆ. ಮಜಾ ಟಾಕೀಸಿನ ಹಳೇಬರಾದ ಕುರಿ ಪ್ರತಾಪ್ ಮತ್ತು ವಿಶ್ವ ತಮ್ಮ ಎಂದಿನ ತಮಾಷೆ ಮಾತುಗಳೊಂದಿಗೆ ತಯಾರಾಗಿದ್ದಾರೆ. ಅವರ ಪಂಚ್ ತುಂಬಿದ ಡೈಲಾಗುಗಳು ಮತ್ತು ಅಭಿನಯ ನಿಮ್ಮನ್ನು ನಗಿಸಲಿದೆ.
ಈ ಸಲದ ಮಜಾ ಟಾಕೀಸಿನಲ್ಲಿ ಹಲವು ಹೊಸ ಪಾತ್ರಗಲಿವೆ. ತಲೆ ತಿನ್ನುವ ಸೆಕ್ಯುರಿಟಿ ಗಾರ್ಡ್ ಆಗಿ ತುಕಾಲಿ ಸಂತೋಷ್, ಸೋಶಿಯಲ್ ಮೀಡಿಯಾ ಸೆನ್ಸೇಶನ್ ಆಗಿ ಪಿಕೆ ನಿಮ್ಮನ್ನು ರಂಜಿಸಿದರೆ, ಎದುರು ಮನೆಯ ಕಿರಿಕ್ ಅಜ್ಜಿಯಾಗಿ ಚಂದ್ರಪ್ರಭಾ ಇರಲಿದ್ದಾರೆ. ಕಲರ್ಸ್ ನ ಮತ್ತೊಂದು ಸುಪರ್ ಹಿಟ್ ಶೋ ‘ಗಿಚ್ಚಿಗಿಚ್ಚಿ ಗಿಲಿಗಿಲಿ’ಯ ಪ್ರತಿಭೆಗಳಾದ ಶಿವು, ವಿನೋದ್ ಗೊಬ್ಬರಗಾಲ, ಸೌಮ್ಯ ಮತ್ತು ಪ್ರಿಯಾಂಕಾ ಕಾಮತ್ ನಿಮ್ಮನ್ನು ನಗಿಸಲಿದ್ದಾರೆ.
ಇವರಷ್ಟೇ ಅಲ್ಲದೆ, ದೀಪಾ ಭಾಸ್ಕರ್, ಮಿಮಿಕ್ರಿ ಗೋಪಿ, ಶ್ರೀ ಭವ್ಯ ಮತ್ತು ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕ ಕೂಡ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿವೀಕ್ಷಕರನ್ನೂ ರಂಜಿಸಲಿದ್ದಾರೆ.
ಇಷ್ಟೊಂದು ಹೊಸ ಮುಖಗಳನ್ನು ಸ್ವಾಗತಿಸಲು ಮಜಾ ಮನೆ ಕೂಡ ಹೊಸ ರೂಪದಲ್ಲಿ ನವೀಕರಣಗೊಂಡು ಮಧುಮಗಳಂತೆ ಸಿಂಗರಿಸಿಕೊಂಡು ಸಜ್ಜಾಗಿದೆ.
ಬರೀ ಮನೆಯೊಳಗಿನ ಪಾತ್ರಗಳಷ್ಟೇ ಅಲ್ಲ, ಈ ಸೀಸನ್ನಿನಲ್ಲಿ ಮಜಾ ಮನೆಗೆ ಬರಲಿರುವ ಅತಿಥಿಗಳ ಪಟ್ಟಿಯೂ ಹೊಸ ರೀತಿ ಇರಲಿದೆ. ಮಜಾ ಟಾಕೀಸ್ ಕಾರ್ಯಕ್ರಮದ ನಿರೂಪಕ ಸೃಜನ್ ಲೋಕೇಶ್. ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಚಿತ್ರ ತಾರೆಗಳಷ್ಟೇ ಅಲ್ಲದೆ, ಈ ಸಲ ಮಜಾ ಮನೆಗೆ ವಿವಿಧ ಕ್ಷೇತ್ರಗಳ ಜನಪ್ರಿಯ ಸಾಧಕರು ಅತಿಥಿಗಳಾಗಿ ಬರಲಿದ್ದಾರೆ. ಕ್ರೀಡಾ ತಾರೆಗಳು, ರಾಜಕಾರಣಿ, ಉದ್ಯಮಿಗಳನ್ನು ಸಹ ನೀವಿಲ್ಲಿ ಎದುರು ನೋಡಬಹುದು ಎಂದು ಕಲ್ಲರ್ಸ್ ಕನ್ನಡ ತಿಳಿಸಿದೆ.