ಮಂಗಳೂರು,ಫೆ.23 : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ “ಸುವರ್ಣ ಸಂಭ್ರಮ“ ಲೋಗೋ ಅನಾವರಣ ಕಾರ್ಯಕ್ರಮ ಬುಧವಾರ ಬೆಳಗ್ಗೆ ಖಾಸಗಿ ಹೋಟೆಲ್ ನಲ್ಲಿ ಜರುಗಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತಾಡಿ, ಜಿಲ್ಲೆಯ ಪತ್ರಕರ್ತರ ಸಂಘದ ವತಿಯಿಂದ ನಡೆಯುವ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ಸಮಾಜಕ್ಕೆ ಮಾದರಿಯಾಗುವ ಕಾರ್ಯಕ್ರಮಗಳನ್ನು ಆಯೋಜಿಸಿ. ನಿಮ್ಮ ಎಲ್ಲ ಕಾರ್ಯಕ್ರಮಗಳ ಜೊತೆಗೆ ನಾನಿರುತ್ತೇನೆ ಎಂದರು.
ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಮಾತಾಡಿ,ಸುವರ್ಣ ಸಂಭ್ರಮದಲ್ಲಿರುವ ಜಿಲ್ಲೆಯ ಪತ್ರಕರ್ತರ ಸಂಘಕ್ಕೆ ಒಳ್ಳೇದಾಗಲಿ ಎಂದರು.
ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಸಿ.ಎ.ಶಾಂತಾರಾಮ್ ಶೆಟ್ಟಿ ಮಾತಾಡಿ, ಜಿಲ್ಲೆಯ ಪತ್ರಕರ್ತರ ಬಗ್ಗೆ ಕಾಳಜಿ ಮತ್ತು ಹೆಮ್ಮೆಯಿದೆ. ಪತ್ರಕರ್ತರು ಮಾಡುವ ಕೆಲಸದಿಂದ ಅವರನ್ನು ಗುರುತಿಸಬಹುದು. ಬಹುಷಃ ಜಾಸ್ತಿ ಸಂಬಳವಿಲ್ಲದ ಪತ್ರಕರ್ತರು ಪ್ರೀತಿ ಮತ್ತು ವಿಶ್ವಾಸದಿಂದ ಆಪ್ತರಾಗುತ್ತಾರೆ ಎಂದರು.
ವೇದಿಕೆಯಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಬಾಳ ಜಗನ್ನಾಥ ಶೆಟ್ಟಿ, ಅನ್ನು ಮಂಗಳೂರು, ರಘುರಾಮ್, ಆನಂದ ಶೆಟ್ಟಿ, ರವೀಂದ್ರ ಶೆಟ್ಟಿ, ಹರ್ಷ ಮತ್ತಿತರರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಧನ್ಯವಾದ ಸಮರ್ಪಿಸಿದರು. ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.