ಮಂಗಳೂರು, ಮಾ. 07 : ಸನ್ ಮ್ಯಾಟ್ರಿಕ್ಸ್ ಬ್ಯಾನರ್ನಡಿ ತಯಾರಾಗಿರುವ ಕೆ. ಸತ್ಯೇಂದ್ರ ಪೈ ನಿರ್ಮಾಣದ ‘ಸ್ಕೂಲ್ ಲೀಡರ್’ ಕನ್ನಡ ಚಲನಚಿತ್ರವು ಏಪ್ರಿಲ್ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ರಜಾಕ್ ಪುತ್ತೂರು ಅವರು ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಕೂಲ್ ಲೀಡರ್ ಚಿತ್ರವು ಪ್ರೌಢಶಾಲಾ ಮಕ್ಕಳ ಶೈಕ್ಷಣಿಕ ಬದುಕು ಮತ್ತು ಮಕ್ಕಳಲ್ಲಿ ನಾಯಕತ್ವ ಗುಣ ಮೈಗೂಡಿಸಿಕೊಳ್ಳುವ ಕಥಾವಸ್ತು ಹೊಂದಿದೆ. ಶಾಲಾ ಚುನಾವಣೆ ಆಧರಿಸಿರುವ ಕಥೆ ಅಗಿರುವುದರಿಂದ ಇಡೀ ಸಿನಿಮಾವನ್ನು ಕಟಪಾಡಿಯ ಒಂದೇ ಶಾಲೆಯಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಸುಮಾರು 25 ಶಾಲೆಗಳ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ’ ಎಂದರು.
ಪೆನ್ಸಿಲ್ ಬಾಕ್ಸ್ ಎಂಬ ಚಿತ್ರದ ನಿರ್ದೇಶಕ ರಜಾಕ್ ಪುತ್ತೂರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡು ಬರೆದಿದ್ದಾರೆ. ಚಿತ್ರದಲ್ಲಿ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ದೀಪಕ್ ರೈ, ರಮೇಶ್ ಭಟ್ ನಟಿಸಿದ್ದಾರೆ ಎಂದು ಸತ್ಯೇಂದ್ರ ಪೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಾನಂದ, ನಾಗೇಶ್ ಕಾಮತ್, ಬಾಲಕೃಷ್ಣ ಶೆಟ್ಟಿ, ಸುದರ್ಶನ, ಜಯಕಾರ್ತಿ ಉಪಸ್ಥಿತರಿದ್ದರು.