ಮಂಗಳೂರು, ಮಾ. 28 : ಮಾ.29ರಂದು ಪೂರ್ವಾಹ್ನ 11ಕ್ಕೆ ವಿಶ್ವವಿದ್ಯಾನಿಲಯದ ಆವರಣದ ಮಂಗಳ ಸಭಾಂಗಣದಲ್ಲಿ 43ನೇ ಘಟಿಕೋತ್ಸವ ನಡೆಯಲಿದೆ ಎಂದು ವಿವಿ ಉಪಕುಲಪತಿ ಪ್ರೊ.ಧರ್ಮ ಅವರು ಕೊಣಾಜೆಯ ಮಂಗಳೂರು ವಿವಿಯ ಆಡಳಿತ ಸೌಧದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಘಟಿಕೋತ್ಸವಕ್ಕೆ ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘ ಉಪಾಧ್ಯಕ್ಷರು ಹಾಗೂ ಸೋಮಿಯಾ ವಿದ್ಯಾವಿಹಾರ್ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ವಿ.ಎನ್.ರಾಜಶೇಖರನ್ ಪಿಳ್ಳೆ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿರುವರು. ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾಗಿರುವ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ. ಉದ್ಯಮಿಗಳಾದ ಎಂ.ಎನ್.ರಾಜೇಂದ್ರ ಕುಮಾರ್, ರೋಹನ್ ಮೊಂತೆರೋ, ಕನ್ಯಾನ ಸದಾಶಿವ ಶೆಟ್ಟಿ ಅವರು ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 64 (ಕಲಾ ನಿಕಾಯ-12, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ-38, ವಾಣಿಜ್ಯ ನಿಕಾಯ – 11, ಶಿಕ್ಷಣ ನಿಕಾಯ – 03) ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ (ಪಿಎಚ್.ಡಿ) ಪಡೆಯಲಿದ್ದಾರೆ.ಇವರಲ್ಲಿ 31 (48.43%) ಪುರುಷರು ಮತ್ತು 33 (51.56%) ಮಹಿಳೆಯರು ಹಾಗೂ 3 (ಪುರುಷ-02, ಮಹಿಳೆ-01) ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿರುವರು ಎಂದರು.
54 ಚಿನ್ನದ ಪದಕ ಮತ್ತು 56 ನಗದು ಬಹುಮಾನಗಳಿದ್ದು, ವಿವಿಧ ಸ್ನಾತಕ/ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಒಟ್ಟು 127 ರ್ಯಾಂ ಕ್ ಗಳಲ್ಲಿ ಪುಥಮ ರ್ಯಾಂ ಕ್ ಪಡೆದ 67 (ಸ್ನಾತಕೋತ್ತರ ಪದವಿ- 49 ಮತ್ತು ಪದವಿ-18) ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಇದರಲ್ಲಿ ಕಲಾ ನಿಕಾಯದ-18, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ- 39, ವಾಣಿಜ್ಯ ನಿಕಾಯದ -08, ಶಿಕ್ಷಣ ನಿಕಾಯದ -02 ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವರಾದ ರಾಜು ಮೊಗವೀರ, ಪ್ರೊ.ದೇವೇಂದ್ರಪ್ಪ ಉಪಸ್ಥಿತರಿದ್ದರು.