ಮಂಗಳೂರು, ಮಾ. 30 : ರೋಟರಿ ಕ್ಲಬ್, ಮಂಗಳೂರು ಸೆಂಟ್ರಲ್ ಮತ್ತು ರೋಟಾಪಕ್ಸ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ರಾಜ್ಯಮಟ್ಟದ 22ನೇ ವಾರ್ಷಿಕ ಮತ್ತು 2025ನೇ ಸಾಲಿನ ಪ್ರತಿಷ್ಠಿತ ‘ವಂದನಾ ಪ್ರಶಸ್ತಿ’ಯನ್ನು ಉದ್ಯಮಿ ಡಾ| ಕೆ. ಪ್ರಕಾಶ್ ಶೆಟ್ಟಿ ಅವರಿಗೆ ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಸಾಧಿಸಿದ ಸೇವೆ ಪರಿಗಣಿಸಿ ಪ್ರದಾನಿಸಲಾಯಿತು.
ಬಳಿಕ ಡಾ| ಪ್ರಕಾಶ್ ಶೆಟ್ಟಿ ಮಾತನಾಡಿ, ನನಗೆ ಪ್ರಶಸ್ತಿಗಳು ದೊರೆಯಲು ಕಾರಣ ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ವ್ಯವಹಾರ ದಕ್ಷತೆ, ಪ್ರಾಮಾಣಿಕತೆ, ಶ್ರಮ, ಗ್ರಾಹಕರ ವಿಶ್ವಾಸ, ಮಿತ್ರರ ಸಹಕಾರ, ಪ್ರೋತ್ಸಾಹ ಕಾರಣ ಎಂದರು.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ| ದೇವದಾಸ್ ರೈ ಮಾತನಾಡಿ, ವಂದನಾ ಪ್ರಶಸ್ತಿಯು ತಮ್ಮ ಸಂಸ್ಥೆಯ ವೃತ್ತಿಪರ ಸೇವೆ ಯೋಜನೆಯ ಅಂಗವಾಗಿದ್ದು, ಈ ವಾರ್ಷಿಕ ಪ್ರಶಸ್ತಿಯನ್ನು ಸಾಧಕರನ್ನು ಗುರುತಿಸಿ ವಿವಿಧ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದರು.
ರೋಟಲ್ಯಾಕ್ಸ್ ಸಂಸ್ಥೆಯ ಅಧ್ಯಕ್ಷ ಬಿದ್ದಪ್ಪ ಅವರು ಪ್ರಶಸ್ತಿ ವಿಜೇತರ ಪರಿಚಯಿಸಿದರು. ರೋಟರಾಕ್ಟ್ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಸಂಜಯ್ ಅವರು ಸಂಸ್ಥೆಯ ಸಾಪ್ತಾಹಿಕ ಗೃಹ ವಾರ್ತಾಪತ್ರಿಕೆ ಬಿಡುಗಡೆಗೊಳಿಸಿದರು. ರೋಟರಿ ಮಂಗಳೂರು ಸೆಂಟ್ರಲ್ನ ಅಧ್ಯಕ್ಷ ಬ್ರಿಯಾನ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಚುನಾಯಿತ ಅಧ್ಯಕ್ಷ ಭಾಸ್ಕ ರೈ ಸಹಾಯಕ ಗವರ್ನರ್ ಕೆ.ಎಂ. ಹೆಗ್ಡೆ, ಕಾರ್ಯದರ್ಶಿ ರಾಜೇಶ್ ಸೀತಾರಾಮ್, ಲೆಕ್ಕ ಪರಿಶೋಧಕ ನಿತಿನ್ ಶೆಟ್ಟಿ ಉಪಸ್ಥಿತರಿದ್ದರು. ರೋಟರಾಕ್ಟ್ ಸಂಸ್ಥೆಯ ಕಾರ್ಯದರ್ಶಿ ಅಕ್ಷಯ್ ರೈ ವಂದಿಸಿದರು.