ಗುರುಪುರ,ಎ. 12 : ದ.ಕ. ಜಿಲ್ಲೆಯ ಸಂಸ್ಕೃತಿಯಾಗಿರುವ ಕಂಬಳವನ್ನು ಉಳಿಸಿ ಬಳೆಸುವ ನಿಟ್ಟಿನಲ್ಲಿ ಸರಕಾರ ಪ್ರೋತ್ಸಾಹ ನೀಡಲು ನಿರ್ಧರಿಸಿದ್ದು, ದಸರಾ ಕ್ರೀಡಾಕೂಟದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವಂತೆ ಸೂಚನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಗುರುಪುರ ಮಾಣಿಬೆಟ್ಟು ಗುತ್ತಿನ ಗದ್ದೆಯಲ್ಲಿ ನಡೆದ ಎರಡನೇ ವರ್ಷದ ಹೊನಲು ಬೆಳಕಿನ ಮೂಳೂರು – ಅಡ್ಡೂರು ಜೋಡುಕರೆ ಕಂಬಳ “ಗುರುಪುರ ಕಂಬಳೋತ್ಸವ”ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತಾಡಿದರು.
ಗುರುಪುರ ಕಂಬಳೋತ್ಸವ ಸಮಿತಿಯ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತಾಡಿ, ಕಂಬಳ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ, ಜಾನಪದ ಕ್ರೀಡೆಯಾಗಿರದೆ ನಮ್ಮ ಸಂಸ್ಕೃತಿಯಾಗಿದೆ. ತಲಪಾಡಿಯಿಂದ ಮುಲ್ಕಿ ವರೆಗಿನ ಬೀಚ್ ರಸ್ತೆ ಗಳನ್ನು ಅಭಿವೃದ್ಧಿ ಪಡಿಸಿ ಬೀಚ್ ಪ್ರಾವಾಸೋದ್ಯಮಕ್ಕೆ ಒತ್ತು ನೀಡಬೇಕು ಎಂದು ಉಪ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.
ಕಂಬಳ ಸಮಿತಿಯ ವತಿಯಿಂದ ನೇಗಿಲು ಹಸ್ತಾಂತರಿಸಿ ಉಪಮುಖ್ಯಮಂತ್ರಿ ಅವರನ್ನು ಸನ್ಮಾನಿಸಲಾಯಿತು. ಕಂಬಳ ಕ್ಷೇತ್ರದಲ್ಲಿ ವಿಶೇಷ ಸಾಧನೆ ತೋರಿದ ದೂಜ ಕೊಣವನ್ನು ಡಿಕೆಶಿ ಸನ್ಮಾನಿಸಿ ಅದರ ಪೋಸ್ಟಲ್ ಸ್ಟಾಂಪ್ ಬಿಡುಗಡೆ ಗೊಳಿಸಿದರು.ಕಂಬಳ ಕ್ಷೇತ್ರದ ಗುಣಪಾಲ ಕಡಂಬ ಪ್ರಾಸ್ತಾವಿಕ ಮಾತನಾಡಿದರು.
ಸಮಾರಂಭದಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಅದ್ಯಕ್ಷ ರಾಜೇಂದ್ರ ಕುಮಾರ್, ಮಾಜಿ ಸಚಿವರಾಗಿರುವ ರಮಾನಾಥ ರೈ, ಅಭಯಚಂದ್ರಜೈನ್, ವಿನಯ ಕುಮಾರ್ ಸೊರಕೆ, ವಿ.ಪ. ಸದಸ್ಯ ಐವನ್ ಡಿಸೋಜಾ, ಪದ್ಮರಾಜ್ ಪೂಜಾರಿ, ಶಕುಂತಲಾ ಶೆಟ್ಟಿ ಪುತ್ತೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ರಕ್ಷಿತ್ ಶಿವರಾಮ, ಮಮತಾ ಗಟ್ಟಿ, ಕಣಚೂರು ಮೋನು, ದೇವಿ ಪ್ರಸಾದ್ ಶೆಟ್ಟಿ ಮೊದಲಾದವರು ಇದ್ದರು.











