ಬಂಟ್ವಾಳ, ಎ.13 : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ವಾರ್ಷಿಕ ಜಾತ್ರೆಯಲ್ಲಿ ಎ. 10, ಗುರುವಾರ ಸಂಜೆ ಶ್ರೀ ರಾಜರಾಜೇಶ್ವರಿ ದೇವಿಯ ಮಹಾರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ರಥೋತ್ಸವದ ದಿನ ಬೆಳಗ್ಗೆ ದೇವರಿಗೆ ಪ್ರಾರ್ಥನೆ ನಡೆದು ಮಹಾಪೂಜೆಯ ಬಳಿಕ ರಥಾರೋಹಣ ನಡೆಯಿತು. ಮಧ್ಯಾಹ್ನ ರಥಕ್ಕೆ ವಿಶೇಷ ಪೂಜೆ ನಡೆದು ಸಂಜೆ ರಥದಲ್ಲಿರುವ ದೇವರಿಗೆ ಪೂಜೆ ನಡೆದ ಬಳಿಕ ಗುತ್ತಿನವರು ಹಾಗೂ ಭಕ್ತರು ತೆಂಗಿನ ಕಾಯಿ ಒಡೆದು ರಥ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಚೆಂಡಿನ ಗದ್ದೆಗೆ ಎಳೆಯಲಾಯಿತು. ಬಳಿಕ ರಂಗು ರಂಗಿನ ಸುಡುಮದ್ದು ಪ್ರದರ್ಶನ ನಡೆಯಿತು.
ರಥೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರ ಅಮ್ಮುಂಜೆಗುತ್ತು ಡಾ| ಮಂಜಯ್ಯ ಶೆಟ್ಟಿ, ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದಜಿ, ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು, ಮಾಜಿ ಸಚಿವರಾದ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ಪವಿತ್ರಪಾಣಿ ಪಿ.ಮಾಧವ ಭಟ್, ದೇವಳದ ತಂತ್ರಿಗಳು, ಅರ್ಚಕರು, ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್, ಗುತ್ತಿನವರು ಪಾಲ್ಗೊಂಡಿದ್ದರು.