ಮಂಗಳೂರು, ಎ.25 : ಪಹಲ್ಗಾಮಿನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಮೃತರಿಗೆ ಸಂತಾಪ ಸೂಚಿಸುತ್ತೇವೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಕಥೊಲಿಕ್ ಸಭಾ ಕೂಡ ಜೊತೆಗಿರಲಿದೆ. ಭಾರತದ ಪ್ರತಿ ಜನರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಭಯೋತ್ಪಾದನೆ ದಾಳಿ ಕ್ರೂರ ಅಪರಾಧ. ಇದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದು ಪತ್ರಿಕಾ ಪ್ರಕಟನೆಯಲ್ಲಿ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಹಾಗೂ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ತಿಳಿಸಿದ್ದಾರೆ.
ಭಯೋತ್ಪಾದಕರನ್ನು ನಿರ್ಮೂಲನೆ ಗೊಳಿಸುವ ಮೂಲಕ, ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿರ್ವಹಿಸಬೇಕು. ಭಯೋತ್ಪಾದಕ ದಾಳಿ ನಡೆದಿರುವುದು ನಿಜಕ್ಕೂ ಕೆಟ್ಟ ಬೆಳವಣಿಗೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಭಗವಂತನು ಕೊಡಲಿ. ಅವರ ಅಕಾಲಿಕ ಮರಣ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಹಾಗೂ ಅಖಿಲ ಭಾರತ ಕ್ರೈಸ್ತ ಒಕ್ಕೂಟ ಇದನ್ನು ಖಂಡಿಸುತ್ತದೆ. ಇಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಬೇಕು. ಭಯೋತ್ಪಾದಕರನ್ನು ಸದೆಬಡೆಯಬೇಕು. ಇಂತಹ ಸಂಘಟನೆಗಳು ಯಾವುದೇ ದೇಶಕ್ಕೆ ಸಂಬಂಧಿಸಿದರು ಆಗಲಿ ಇವುಗಳನ್ನು ಬುಡ ಸಮೇತ ಕಿತ್ತೊಗೆಯಬೇಕು. ಆತ್ಮಗಳಿಗೆ ಶಾಂತಿ ಕೋರುತ್ತೇವೆ ಗಾಯಾಳುಗಳ ಚೇತರಿಕೆಗೆ ಪ್ರಾರ್ಥಿಸುತ್ತೇವೆ ಎಂದು ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ತಿಳಿಸಿದ್ದಾರೆ.