ಮಂಗಳೂರು, ಎ. 28 : ಎಂ.ಸಿ.ಸಿ ಬ್ಯಾಂಕ್ ಮಂಗಳೂರು ಇದರ ಆಡಳಿತ ಕಛೇರಿಯಲ್ಲಿ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ತಾ. ಎ.24 ರಂದು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಫಾ| ಮುಲ್ಲರ್ಸ್ ಸಂಸ್ಥೆಯ ನಿಯೋಜಿತ ನೀರ್ದೇಶಕರಾದ ವಂದನೀಯ ಪೌಸ್ತಿನ್ ಲೋಬೊ ಹಾಜರಿದ್ದರು. ಅವರು ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಗೌರವ ಸಲ್ಲಿಸಿದರು. ಬಳಿಕ ಮಾತಾಡಿದ ಪೌಸ್ತಿನ್ ಲೋಬೊ ಅವರು, ತಮ್ಮ ಜೀವನದುದ್ದಕ್ಕೂ ಸರಳ ಮತ್ತು ವಿನಮ್ರ ಜೀವನಶೈಲಿಯನ್ನು ನಡೆಸುವ ಮೂಲಕ ಸಂತ ಫ್ರಾನ್ಸಿಸ್ ಅಸ್ಸಿಸಿಯ ಹೆಜ್ಜೆಗಳನ್ನು ಅಕ್ಷರಶ: ಅನುಸರಿಸಿದರು. ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಪ್ರಗತಿಪರರಾಗಿದ್ದರು ಮತ್ತು ಅನಗತ್ಯ ಮತ್ತು ಅಪ್ರಸ್ತುತ ಅಭ್ಯಾಸಗಳನ್ನು ತೆಗೆದುಹಾಕುವಲ್ಲಿ ನಂಬಿಕೆ ಇಟ್ಟಿದರು. ಪ್ರಪಂಚದಾದ್ಯಂತ ಯುದ್ದಗಳು ಮತ್ತು ಸಂಘರ್ಷಗಳಿಂದಾಗಿ ಬಳಲುತ್ತಿರುವ ಮಾನವಕುಲದ ಬಗ್ಗೆ ಅವರು ಆಳವಾದ ಸಹಾನಭೂತಿಯನ್ನು ಹೊಂದಿದ್ದರು. ಅವರು ಜನರಲ್ಲಿ ಅಂತರ್ ಧರ್ಮೀಯ ಸಾಮರಸ್ಯವನ್ನು ಪ್ರತಿಪಾದಿಸಿದರು ಮತ್ತು ಶಾಂತಿಯನ್ನು ತರಲು ಬಯಸಿದರು ಎಂದು ಅವರು ಹೇಳಿದರು.
ಬ್ಯಾಂಕಿನ ನಿರ್ದೇಶಕಿ ಶ್ರೀಮತಿ ಐರಿನ್ ರೆಬೆಲ್ಲೊ ಮಾತಾಡಿದ ಅವರು, ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರು ರೋಮನ್ ಕ್ಯಾಥೋಲಿಕ್ ಚರ್ಚ್ ನ ಸರ್ವೋಚ್ಛ ಮಠಾಧೀಶರಾಗಿ ವಹಿಸಿದ್ದ ಸ್ಥಾನಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಾ ಅವರು ಸಾಗಿದ ಹಾದಿಯನ್ನು ಪ್ರಸ್ತುತಪಡಿಸಿದರು. ಪೋಪ್ ಫ್ರಾನ್ಸಿಸ್ ಅವರ ಜೀವನ ಪ್ರಯಾಣವನ್ನು ಪ್ರಸ್ತುತಪಡಿಸುವಾಗ ಪೋಪ್ ಅವರ ಸರಳತೆ, ಬಡವರು, ದೀನದಲಿತರು ಮತ್ತು ರೋಗಿಗಳ ಬಗೆಗಿನ ಅವರ ಕಾಳಜಿಯನ್ನು ವಿವರಿಸಿದರು.
ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅವರು ಬ್ಯಾಂಕಿನ ಎಲ್ಲಾ ನಿರ್ದೇಶಕರು, ಗ್ರಾಹಕರು ಮತು ಸಿಬ್ಬಂದಿಗಳ ಪರವಾಗಿ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರ ಭಾವಚಿತ್ರಕ್ಕೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು. ವಂ. ಪೌಸ್ತಿನ್ ಲೋಬೊ ಮತ್ತು ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಎಲ್ಲಾ ನಿರ್ದೇಶಕರು, ಅಡಳಿತ ಕಛೇರಿ ಮತ್ತು ಸಂಸ್ಥಾಪಕ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು. ಮಹಾಪ್ರಬಂಧಕ ಸುನಿಲ್ ಮಿನೆಜಸ್ ವಂದಿಸಿ, ಹಿರಿಯ ಪ್ರಬಂಧಕ ಶ್ರೀ ಡೇರಿಲ್ ಲಸ್ರಾದೊ ನಿರೂಪಿಸಿದರು