ಮಂಗಳೂರು, ಎ.30 : ಉದ್ಯಮಿ ಮತ್ತು ಸಮಾಜ ಸೇವಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ 2024 – 25 ನೇ ಸಾಲಿಗೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಭಾರತೀಯ ಪ್ರಜೆಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿದೆ.
ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ದುರ್ಗಾ ಫೆಸಿಲಿಟೀಸ್ ಮ್ಯಾನೇಜ್ಮೆಂಟ್ ಸರ್ವಿಸಸ್ ಪ್ರೈ. ಲಿ. ಎಂಬ ಸಂಸ್ಥೆಯನ್ನು 2007 ರಲ್ಲಿ ಸ್ಥಾಪಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಅದರ ಶಾಖೆಗಳನ್ನು ತೆರೆದು ತಮ್ಮ ಸೇವೆಯನ್ನು ವಿಸ್ತರಿಸಿರುತ್ತಾರೆ.
ಬೊಂಡಾಲ ಸಚ್ಚಿದಾನಂದ ಶೆಟ್ಟರು 2012 ರಲ್ಲಿ ಶಂಭೂರು ಸರಕಾರಿ ಪ್ರೌಢಶಾಲೆಯನ್ನು ದತ್ತು ಪಡೆದುಕೊಂಡು ತಮ್ಮ ಹಣದಿಂದ ಹಾಗೂ ಇತರರ ನೆರವಿನಿಂದ ಅದರ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಿದ್ದಾರೆ. ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿರುವ ಬಿ.ಎಸ್. ಶೆಟ್ಟರು ಅದರ ಮೂಲಕ ವಿವಿಧ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ.
ಬಿ.ಎಸ್. ಶೆಟ್ಟರು 2017ರಲ್ಲಿ ಕರ್ನಾಟಕ ಸರಕಾರದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯಿಂದ ಗೌರವ ಸನ್ಮಾನಗಳನ್ನು ಪಡೆದಿದ್ದಾರೆ. ಉದ್ಯಮ ಕ್ಷೇತ್ರದ ಸಾಧನೆಗಾಗಿ ದೇಶದ ಅತ್ಯುತ್ತಮ ಪ್ರಶಸ್ತಿಗಳಾದ ಸ್ಕಾಚ್ ಆರ್ಡರ್ ಆಫ್ ಮೆರಿಟ್ ಅವಾರ್ಡ್ ಕೂಡ ಪಡೆದಿದ್ದಾರೆ.
ಇದೇ ಮೇ 22, 2025 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗುವ 50ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೊಂಡಾಲ ಸಚ್ಚಿದಾನಂದ ಶೆಟ್ಟರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.