ಮಂಗಳೂರು, ಮೇ10 : ಗುರುಪುರ ಫಲ್ಗುಣಿ ನದಿತಟದ ಗೋಳಿದಡಿ ಗುತ್ತುವಿನಲ್ಲಿ ಶ್ರೀ ಗುರು ಮಹಾಕಾಲೇಶ್ವರ ದೇವರ ಏಕ ಶಿಲಾ ಮೂರ್ತಿಯ ಪ್ರತಿಷ್ಠೆ, ಬ್ರಹ್ಮ ಕಲಶ ಮಹೋತ್ಸವ ಸಂಭ್ರಮ ವೇದಕೃಷಿಕ ಬ್ರಹ್ಮರ್ಷಿ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನ ಮತ್ತು ನಿರ್ದೇಶನದಲ್ಲಿ ಮೇ 15, 16, 17ರಂದು ನಡೆಯಲಿದೆ ಎಂದು ಬ್ರಹ್ಮ ಕಲಶ ಸಂಭ್ರಮ ಸಮಿತಿಯ ಅಧ್ಯಕ್ಷ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ಪ್ರಥಮ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಏಕೈಕ ಮೂರ್ತಿ ಇದು. ವೇದೋಕ್ತ ವಿಧಿವಿಧಾನಗಳಿಂದ ಪ್ರತಿಷ್ಠಾ ಪಂಚಕಲ್ಯಾಣಯುಕ್ತ ಬ್ರಹ್ಮ ಕಲಶಾಭಿಷೇಕ ನಡೆಯಲಿದೆ. 2.5 ಎಕ್ರೆ ಪ್ರದೇಶದಲ್ಲಿ 22.5 ವಿಸ್ತೀರ್ಣದ ಪೀಠ, 23 ಅಡಿ ಎತ್ತರದ ವಿಗ್ರಹ ಸ್ಥಾಪನೆಯಾಗಿದೆ.ತೀರ್ಥಬಾವಿ ಸ್ನಾನಘಟ್ಟದ ವ್ಯವಸ್ಥೆ, ಧ್ಯಾನ ಕೇಂದ್ರ ನಿರ್ಮಿಸಲಾಗಿದೆ ಎಂದರು.
ಮೇ 15 ರಂದು ಗುರುವಾರ ಶುದ್ಧಿ ಪ್ರಕ್ರಿಯೆ, ವಾಸ್ತುಶುದ್ಧಿ ಸಹಿತ ನಾನಾ ವೇದೋಕ್ತ ವಿಧಿವಿಧಾನಗಳು ಪ್ರಾರಂಭಗೊಳ್ಳಲಿದೆ. ಮೇ 16 ರ ಸಂಜೆ 4ರಿಂದ ಶ್ರೀ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ವಿಗ್ರಹಕ್ಕೆ ಬ್ರಹ್ಮಕಲಶಾಭಿಷೇಕವು (ಪಂಚಕಲ್ಯಾಣಯುಕ್ತ ಅಭಿಷೇಕ), ಹಾಲು, ಎಳನೀರು, ಕುಂಕುಮ, ಹರಿದ್ರೋದಕ ಹಾಗೂ ಗಂಧೋದಕ ಸಹಿತವಾದ ಪಂಚ ಕಲ್ಯಾಣಯುಕ್ತ ಅಭಿಷೇಕವು ಸಮರ್ಪಣೆಗೊಳ್ಳಲಿದೆ. ಮೇ17ರಂದು ಸಂಜೆ 6ರಿಂದ ಶಿವಾನುಭವ ಮಂಟಪ-ಧಾರ್ಮಿಕ ಸಭೆ ನಡೆಯಲಿದೆ. ಮೂರು ದಿನ ದಿನವಿಡೀ ಬೆಳಗ್ಗೆಯಿಂದ ರಾತ್ರಿವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.
ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರು ಮಾತನಾಡಿ, ಮೇ 16ರಂದು ಶ್ರೀ ದೇವಸ್ಥಾನದ ಕಾರ್ಯಾಲಯ ಶ್ರೀ ನಿತ್ಯಾನಂದ ಕಟ್ಟಡ, ದೇವಸ್ಥಾನ ಸಭಾಂಗಣ ಶ್ರೀ ಉಮಾ ಪದ್ಮನಾಭ ಸಭಾಂಗಣ, ದೇವಸ್ಥಾನದ ಅತಿಥಿಗೃಹ ‘ಶ್ರೀ ಶಿವಪ್ರಕಾಶ’ವನ್ನು ಚಿಕ್ಕಮಗಳೂರು ವೇದವಿಜ್ಞಾನ ಮಂದಿರದ ಕೆ.ಎಸ್.ನಿತ್ಯಾನಂದ ಗುರುಗಳು ಉದ್ಘಾಟಿಸುವರು.
ಗುರುಮಹಾಕಾಲೇಶ್ವರ ದೇವರ ಬ್ರಹ್ಮಕಲಶ ಸಂಭ್ರಮಕ್ಕೆ ಮೇ 14ರ ಮಧ್ಯಾಹ್ನ 3ರಿಂದ ಮೇ15ರ ಸಂಜೆ 6ರವರೆಗೆ ಹೊರಕಾಣಿಕ ಸಮರ್ಪಿಸಬಹುದಾಗಿದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲು, ಶ್ರೀ ಗುರು ಮಹಾ ಕಾಲೇಶ್ವರ ರಿಲೀಜಿಯಸ್ ಟ್ರಸ್ಟ್ ನ ಕಾರ್ಯದರ್ಶಿ ಉಷಾ ಪ್ರಸಾದ್ ಶೆಟ್ಟಿ, ಬ್ರಹ್ಮ ಕಲಶ ಸಂಭ್ರಮ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ, ಹೊರಕಾಣಿಕೆ ಮತ್ತು ಉಗ್ರಾಣ ಸಮಿತಿಯ ಸಂಚಾಲಕ ನಾರಾಯಣ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಪ್ರಭು, ಸಮಿತಿಯ ಉಪಾಧ್ಯಕ್ಷ ಯಶವಂತ್ ಸಾಲ್ಯಾನ್ ಮೂಲ್ಕಿ ಕಾರ್ಯದರ್ಶಿಗಳಾದ ಸತೀಶ್ ಕಾವ,ಸುನಿಲಾ ಪ್ರಭಾಕರ ಶೆಟ್ಟಿ, ಸಂಚಾಲಕ ಸುನಿಲ್ ಕುಮಾರ್ ಸುವರ್ಣ, ಸ್ವಾಗತ ಸಮಿತಿಯ ಕಾರ್ಯ ದರ್ಶಿ ದಿವ್ಯಾ ರತನ್ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.