ಮಂಗಳೂರು, ಆ.16: ದ.ಕ. ಜಿಲ್ಲಾಡಳಿತ ವತಿಯಿಂದ ನಗರದ ನೆಹರೂ ಮೈದಾನದಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯಿತು. ಆಕರ್ಷಕ ಪಥಸಂಚಲನದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಸಂದೇಶ ಭಾಷಣ ಮಾಡಿದ ಅವರು, ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಕರ್ನಾಟಕ ಸರಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಸ್ವಾತಂತ್ರೋತ್ಸವದ ನೈಜ ಉದ್ದೇಶವನ್ನು ಈಡೇರಿಸಿದ ತೃಪ್ತಿ ತಂದಿದೆ. ಗ್ಯಾರಂಟಿ ಯೋಜನೆಗಳು ಹೊಸ ಇತಿಹಾದ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು, ದೇವಸ್ಥಾನ, ಮಸೀದಿ, ಚರ್ಚ್ ಗಳ ಧಾರ್ಮಿಕ ಮುಖಂಡರು ತಮ್ಮ ತಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಜನರಿಗೆ ತಿಳುವಳಿಕೆ ನೀಡಬೇಕು. ಕಲೆ, ನಾಟಕ, ಯಕ್ಷಗಾನ ಕ್ಷೇತ್ರಗಳಲ್ಲೂ ಸಹ ಸಾಮರಸ್ಯ ಸಂದೇಶ ಸಾರುವತ್ತ ಕಲಾವಿದರು ಹೆಚ್ಚಿನ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಲಭೂತ ಸೌಕರ್ಯ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಅನುದಾನ ನೀಡಿದೆ. ಜಿಲ್ಲೆಯಲ್ಲಿ ಯಾವುದೇ ಬಾಹ್ಯ ಒತ್ತಡಕ್ಕೆ ಅವಕಾಶವಿಲ್ಲದೇ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ ಎಂದರು.
ಪೊಲೀಸ್ ತಂಡಗಳು, ಸಶಸ್ತ್ರಮೀಸಲು ಪಡೆ, ಎನ್ ಸಿಸಿ, ಕೆಎಸ್ ಆರ್ ಪಿ, ಸೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾ ದಳದ ವಿದ್ಯಾರ್ಥಿಗಳ ಶಿಸ್ತಿನ ಪಥ ಸಂಚಲನ ನಡೆಯಿತು.
ಈ ಸಂದರ್ಭದಲ್ಲಿ ಸಂಸದ ಕ್ಯಾ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸದಸ್ಯ ಹರೀಶ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಐಜಿಪಿ ಅಮಿತ್ ಸಿಂಗ್, ಎಸ್ಪಿ ಡಾ. ಅರುಣ್ ಕುಮಾರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ್ ನರ್ವಾಡೆ ಉಪಸ್ಥಿತರಿದ್ದರು.