ಮಂಗಳೂರು, ಆ. 26: ಜಪ್ಪಿನಮೊಗರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 17ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಗಸ್ಟ್ 26ರಿಂದ 28ರ ವರೆಗೆ ಜಪ್ಪಿನಮೊಗರು ಗಣೇಶ ಮಂಟಪದಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಜೆ. ನಾಗೇಂದ್ರ ಕುಮಾರ್ ಶನಿವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಆಗಸ್ಟ್26ರಂದು ಸಂಜೆ ಗಂಟೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಜಪ್ಪಿನಮೊಗರು ಶ್ರೀ ವೈದ್ಯನಾಥ ಮಹಾದ್ವಾರದಿಂದ ಶ್ರೀ ವಿಶ್ವೇಶ್ವರನ ವಿಗ್ರಹವನ್ನು ಶ್ರೀ ಗಣೇಶ ಮಂಟಪಕ್ಕೆ ತರಲಾಗುತ್ತದೆ. 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ ಎಂದರು,
ಆಗಸ್ಟ್ 27ರಂದು ಬೆಳಗ್ಗೆ 7ಗಂಟೆಗೆ ಬ್ರಹ್ಮಶ್ರೀ ವಿಠಲದಾಸ್ ತಂತ್ರಿ ಅವರ ಪೌರೋಹಿತ್ಯದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾಪನೆ ನಡೆಯಲಿದೆ. 9ಗಂಟೆಗೆ ಪ್ರತಿಷ್ಠಾಪನ ಸಭಾ ಕಾರ್ಯಕ್ರಮ ನಡೆಯಲಿದೆ. 10ಗಂಟೆಗೆ ಹಸಿರು ತೆನೆ ವಿತರಣೆ, ಅನಂತರ ಭಜನಾ ಕಾರ್ಯಕ್ರಮ, ಮಧ್ಯಾಹ್ನದ ಮಹಾಪೂಜೆ ನಡೆಯಲಿದೆ. ಸಂಜೆ 5.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 7ಕ್ಕೆ ಸಾರ್ವಜನಿಕ ರಂಗಪೂಜೆ ಹಾಗೂ ಮಹಾಪೂಜೆ, ಅನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಆಗಸ್ಟ್ 28ರಂದು ಬೆಳಗ್ಗೆ 7.30 ರಿಂದ 108 ತೆಂಗಿನಕಾಯಿಯ ಮಹಾಗಣಯಾಗ, 10.30ಕ್ಕೆ ಪೂರ್ಣಾಹುತಿ. ಮಧ್ಯಾಹ್ನ 1.30ಕ್ಕೆ ಮಹಾಪೂಜೆ ಅನಂತರ ಅನ್ನಸಂತರ್ಪಣೆ, 2 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಗಂಟೆಗೆ ವಿವಿಧ ಕುಣಿತ ಭಜನೆ, ಚಂಡೆ, ವಾದ್ಯಗಳೊಂದಿಗೆ ಶ್ರೀ ವಿಶ್ವೇಶ್ವರ ದೇವರ ಭವ್ಯವಾದ ಶೋಭಾಯಾತ್ರೆ ಆರಂಭವಾಗಲಿದೆ. ರಾತ್ರಿ 11 ಗಂಟೆಗೆ ಕಡೆಕಾರು ನೇತ್ರಾವತಿ ನದಿ ತೀರದಲ್ಲಿ ಜಲಾಧಿವಾಸ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷರಾದ ಸುಧಾಕರ ಜೆ., ಶ್ರೀಧರ್ ರಾಜ್ ಶೆಟ್ಟಿ, ಪ್ರಧಾನ ಕೋಶಾಧಿಕಾರಿ ಶೈಲೇಶ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ಸುಭಾಶ್ ವಿ. ಅಡಪ್ಪ, ಪ್ರಧಾನ ಸಂಚಾಲಕರಾದ ಜೆ.ಪ್ರಾಣೇಶ್ ರಾವ್, ಶಿವಾನಂದ ರಾವ್ ಬಜೆಹಿತ್ತು, ಹರೀಶ್ ಶೆಟ್ಟಿ ತಾರ್ದೋಲ್ಯ ಉಪಾಧ್ಯಕ್ಷ ಶೇಖರ್ ಸನಿಲ್, ಮುಖ್ಯ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.