ಮಂಗಳೂರು, ಸೆ.8: ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಸಾರಥ್ಯ ಹಾಗೂ ನಮ್ಮ ಟಿವಿ ಸಹಯೋಗದಲ್ಲಿ 10ನೆ ಆವೃತ್ತಿಯ ಪಿಲಿನಲಿಕೆ ಕಾರ್ಯಕ್ರಮ ಅ. 1ರಂದು ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ ಎಂದು ಪ್ರತಿಷ್ಟಾನದ ಅಧ್ಯಕ್ಷ ಮಿಥುನ್ ರೈ ಅವರು ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಿಲಿನಲಿಕೆ ಪಂಥ ಕಾರ್ಯಕ್ರಮವನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ ನಸೀರ್ ಹುಸೇನ್ ಸೇರಿದಂತೆ ಸಂಸದರು, ಶಾಸಕರು ಆಗಮಿಸಲಿದ್ದಾರೆ. ಪಿಲಿನಲಿಕೆ ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಜಾಕೀಶ್ರಾಫ್, ಸ್ಯಾಂಡಲ್ವುಡ್ ನಟರಾದ ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಸಿನಿಮಾ, ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ ಎಂದವರು ಹೇಳಿದರು.
10ನೆ ವರ್ಷದ ಪಿಲಿನಲಿಕೆ ಸ್ಪರ್ಧೆಯ ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ 10 ಲಕ್ಷ ರೂ. ದ್ವಿತೀಯ ಬಹುಮಾನವಾಗಿ 5 ಲಕ್ಷ ರೂ. ಹಾಗೂ ತೃತೀಯ ಬಹುಮಾನವಾಗಿ 3 ಲಕ್ಷ ರೂ. ಹಾಗೂ ಫಲಕಗಳನ್ನು ವಿಜೇತ ತಂಡಗಳಿಗೆ ನೀಡಿ ಗೌರವಿಸಲಾಗುವುದು. ಸಾಂಪ್ರದಾಯಿಕವಾಗಿ ಹರಕೆ ರೂಪದಲ್ಲಿ ನಡೆಸಲಾಗುವ ಪಿಲಿ ನಲಿಕೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಯ್ದ 10 ತಂಡಗಳಿಗೆ ಮಾತ್ರವೇ ಸದ್ಯ ಅವಕಾಶ ನೀಡಲಾಗುತ್ತಿದೆ. ಭಾಗವಹಿಸುವ ಎಲ್ಲಾ ತಂಡಗಳಿಗೆ ಪ್ರೋತ್ಸಾಹಕ ಧನವಾಗಿ 50,000 ರೂ. ನಗದು ಬಹುಮಾನ ನೀಡಲಾಗುತ್ತದೆ. ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಮರಿ ಹುಲಿ, ಕರಿ ಹುಲಿ, ಮುಡಿ ಹಾರಿಸುವುದು, ತಾಸೆ, ಬಮ್ಣಗಾರಿಕೆ, ಅತ್ಯುತ್ತಮ ಹುಲಿ ಕುಣಿತಕ್ಕೆ ತಲಾ 50000 ರೂ. ನಗದು ಬಹುಮಾನ ನೀಡಲಾಗುವುದು. ಪಿಲಿನಲಿಕೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಗಳಿಗೂ 20 ನಿಮಿಷ ಕಾಲಾವಕಾಶ ನೀಡಲಾಗುವುದು. ಬೆಳಗ್ಗೆ 10ಗಂಟೆಗೆ ಆರಂಭವಾಗುವ ಈ ಸ್ಪರ್ಧೆ ರಾತ್ರಿ 10ರವರೆಗೆ ನಡೆಯಲಿದೆ ಎಂದರು.
10ನೆ ವರ್ಷದ ಅಂಗವಾಗಿ ಮೂಡಬಿದ್ರೆಯ ಗ್ರಾಮೀಣ ಭಾಗದ ಸರಕಾರಿ ಶಾಲೆಯೊಂದನ್ನು ದತ್ತುಪಡೆದು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡಲು ಚಿಂತಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪ್ರತಿಷ್ಠಾನದ ಪ್ರಮುಖರಾದ ವಿಕಾಸ್ ಶೆಟ್ಟಿ, ಅವಿನಾಸ್ ಸುವರ್ಣ, ನವೀನ್ ಶೆಟ್ಟಿ ಎಡ್ಮೆಮ್ಮಾರ್, ನಮ್ಮ ಟಿವಿ ವಾಹಿನಿಯ ಮುಖ್ಯಸ್ಥರಾದ ಶಿವಶರಣ್ ಶೆಟ್ಟಿ, ದುಬೈ ಉದ್ಯಮಿ ಆನಂದ್ರಾಜ್ ಶೆಟ್ಟಿ ಉಪಸ್ಥಿತರಿದ್ದರು.