ಮಂಗಳೂರು, ಸೆ. 13: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳಿಂದ ಸೆ.14ರಂದು ‘ಧರ್ಮ ಜಾಗೃತಿ ಯಾತ್ರೆ’ನಡೆಯಲಿದೆ. ಅಂದು ಮಧ್ಯಾಹ್ನ 12 ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಯಾತ್ರೆ ನಡೆಯಲಿದೆ ಎಂದು ಸಂಘಟಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು,ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳು ಯಾವಾಗಲೂ ಸೌಹಾರ್ದತೆಯಿಂದ, ಪರಸ್ಪರ ಸಹಬಾಳ್ವೆಯಿಂದ ಕಾರ್ಯ ನಿರ್ವಹಿಸುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿ ಬಂಧುಗಳು ಪಕ್ಷಾತೀತವಾಗಿ ಹಾಗೂ ಜಾತ್ಯತೀತ ವಾಗಿ ಒಗ್ಗಟ್ಟಾಗಿ, ‘ಸಹಕಾರ ರತ್ನ’ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಧರ್ಮ ಜಾಗೃತಿ ಯಾತ್ರೆ ನಡೆಸಲಿದ್ದಾರೆ ಎಂದರು.
ಈ ಯಾತ್ರೆಯಲ್ಲಿ 1500ಕ್ಕೂ ಅಧಿಕ ಸಹಕಾರಿ ಸಂಘಗಳು, 3000ಕ್ಕೂ ಅಧಿಕ ವಾಹನಗಳು ಭಾಗಿಯಾಗಲಿವೆ.ಇದೊಂದು ಧರ್ಮ ಸಂರಕ್ಷಣೆಯ ಯಾತ್ರೆಯಾಗಿದೆ. ಧಾರ್ಮಿಕ ಕ್ಷೇತ್ರಗಳ ವಿರುದ್ಧ ಅಪಪ್ರಚಾರ ಮಾಡುವ ಷಡ್ಯಂತ್ರಿಗಳ ವಿರುದ್ಧ ಈ ಯಾತ್ರೆಯನ್ನು ಆಯೋಜಿಸಲಾಗಿದೆ. ಪವಿತ್ರ ಧರ್ಮಸ್ಥಳ ಕ್ಷೇತ್ರದ ಮೇಲೆ ವಿಶೇಷ ಗೌರವ, ಶ್ರದ್ಧಾ ಭಕ್ತಿಯನ್ನು ಸಹಕಾರ ಕ್ಷೇತ್ರ ಹೊಂದಿದೆ. ಹಾಗಾಗಿ, ಈ ಧರ್ಮ ಕ್ಷೇತ್ರಕ್ಕೆ ಅಪಚಾರವಾಗವೆಸಗುವವರಿಗೆ ಸ್ಪಷ್ಟ ಸಂದೇಶವನ್ನು ನೀಡುವ ಈ ಧರ್ಮ ಜಾಗೃತಿ ಯಾತ್ರೆ ಆಗಬೇಕಾಗಿದೆ ಎಂದವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಹಕಾರ ಕ್ಷೇತ್ರಕ್ಕೆ ವಿಶೇಷ ಕೊಡುಗೆ ಲಭಿಸಿದೆ. ಸಹಕಾರ ಕ್ಷೇತ್ರ ಸರ್ವ ಧರ್ಮಕ್ಕೂ ಗೌರವ ನೀಡುವ ಕ್ಷೇತ್ರ ಆಗಿರುವುದರಿಂದ ಸರ್ವ ಧರ್ಮಗಳ ಸಂರಕ್ಷಣೆಯ ದೃಷ್ಟಿಯಿಂದ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಸಹಕಾರಿಗಳು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಎಸ್. ಬಿ. ಜಯರಾಮ ರೈ, ಎಸ್.ಎನ್. ಮನ್ಮಥ, ಕೆ.ಜೈರಾಜ್ ಬಿ.ರೈ, ಸ್ಕ್ಯಾಡ್ಸ್ ಅಧ್ಯಕ್ಷರಾದ ರವೀಂದ್ರ ಕಂಬಳಿ ಮತ್ತಿತ್ತರರು ಉಪಸ್ಥಿತರಿದ್ದರು.