ಮಂಗಳೂರು, ಸೆ. 18 : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ 18ನೇ ವಾರ್ಷಿಕ ಸಮಾರಂಭದ ಪ್ರಯುಕ್ತ ಸ್ವರ ಕುಡ್ಡ ಗ್ರಾಂಡ್ ಫಿನಾಲೆ ಹಾಗೂ ವಾರ್ಷಿಕ ಸಮಾರಂಭ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿ, ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ವತಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಾ ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದರು.
ಪತ್ರಕರ್ತ ವಾಲ್ಟರ್ನಂದಳಿಕೆ ಮಾತನಾಡಿ, ಸಂಗೀತ ಕಲಾವಿದರು ತಮ್ಮ ಸಂಗೀತದ ಮೂಲಕ ಜನರನ್ನು ರಂಜಿಸುತ್ತಾರೆ. ತುಳುನಾಡಿನಲ್ಲಿ ಕಲಾವಿದರಿಗೆ ಬೆಲೆ ಕಟ್ಟುವುದಕ್ಕಿಂತ ಬೆಲೆ ನೀಡುವವರಿದ್ದಾರೆ. ಜನರಿಗೆ ಮನೋರಂಜನೆ ನೀಡುವುದು ಸುಲಭವಲ್ಲ ಎಂದರು.
ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದ ಹಿರಿಯ ಕಲಾ ಸಾಧಕರಾದ ತೊನ್ನೆ ಪುಷ್ಕಳ ಕುಮಾರ್, ಐವನ್ ಸೀಕ್ವೆರಾ, ಹನೀಫ್ ಪರ್ಲಿಯಾ ಪರವಾಗಿ ಹುಸೈನ್ ಕಾಟಿಪಳ್ಳ ಅವರಿಗೆ ಕರಾವಳಿ ಸಂಗೀತ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ವರ ಕುಡ್ಡ ಗ್ಯಾಂಡ್ ಫಿನಾಲೆ ವಿಜೇತರಿಗೆ ಪ್ರಶಸ್ತಿ ಪ್ರದಾನ ಮತ್ತು ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಸದಸ್ಯರಿಂದ ಸಂಗೀತ ರಸಮಂಜರಿ ನಡೆಯಿತು.
ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ಕೇಶವ ಕನಿಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲಬೈಲು, ಭಗವತಿ ಸಹಕಾರ ಬ್ಯಾಂಕ್ ನಿ. ಅಧ್ಯಕ್ಷ ಮಾಧವ ಬಿ.ಎಂ., ವಿರಾಜಪೇಟೆಯ ಡಿವೈಎಸ್ಪಿ ಮಹೇಶ್ ಕುಮಾರ್, ಸಾನ್ನಿಧ್ಯ ವಸತಿಯುತ ಶಾಲೆಯ ನಿರ್ದೇಶಕ ಜಗದೀಶ್ ಶೆಟ್ಟಿ ಬೋಳೂರು, ಪ್ರಮುಖರಾದ ಪುಷ್ಪರಾಜ್, ದನುರಾಜ್ ಅತ್ತಾವರ, ಸುಭಾಷಿತ್ ಕುಮಾರ್ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ರಮೇಶ್ ಸಾಲ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ರಾಮ್ ಕುಮಾರ್ ಅಮೀನ್ ಅವರು ವಾರ್ಷಿಕ ಚಟುವಟಿಕೆಗಳ ವರದಿ ವಾಚಿಸಿದರು. ಕೃಷ್ಣ ಪ್ರಸಾದ್ ನಿರೂಪಿಸಿದರು. ಹರಿಣಿ ಉದಯ್ ಅವರು ವಂದಿಸಿದರು.