ಮಂಗಳೂರು, ಸೆ. 19 : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಬಂಟ, ನಾಡವರನ್ನು ಪ್ರತ್ಯೇಕವಾಗಿ ಪರಿಗಣಿಸಬಾರದು. ಇವೆರಡೂ ಒಂದೇ ಜಾತಿ, ಸಮುದಾಯವಾಗಿದೆ. ಸಮೀಕ್ಷೆ ಸಂದರ್ಭದಲ್ಲಿ ಅದನ್ನು ಸಷ್ಟವಾಗಿ ಕಾಣಿಸಬೇಕು ಎಂದು ಬಂಟರ ಯಾನ ನಾಡವರ ಮಾತೃಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರು ಗುರುವಾರ ಬಂಟರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, ಸಮೀಕ್ಷೆಗೆ ವಿರೋಧವಿಲ್ಲ. ಆದರೆ ನಮ್ಮ ಹೆಸರು ಉಲ್ಲೇಖ ಸ್ಪಷ್ಟವಾಗಿರಬೇಕು. ಸಮೀಕ್ಷೆಗೆ ಬರುವಾಗ ಸಮುದಾಯದವರು ಮೊಬೈಲ್ ಆಪ್ ನಲ್ಲಿರುವ 8ನೇ ಕಾಲಂನಲ್ಲಿ ಧರ್ಮ ಎಂದಿರುವ ಜಾಗದಲ್ಲಿ ಹಿಂದೂ ಎಂದು ನಮೂದಿಸಿ 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A-0227) ರಂತೆ ಬಂಟ್ ಎಂದು ನಮೂದಿಸಬೇಕು. 11ನೇ ಕಾಲಂನಲ್ಲಿ ಸಮಾನಾರ್ಥದ (ಪರ್ಯಾಯ) ಹೆಸರು ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A-1026)ರಂತೆ ನಾಡವ ಎಂದು ನಮೂದಿಸಬೇಕು. ಇದೇ ರೀತಿ 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A- 1026) ರಂತೆ ನಾಡವ ಎಂದು ನಮೂದಿಸುವ ಸಮಾಜ ಬಾಂಧವರು, 11ನೇ ಕಾಲಂನಲ್ಲಿರುವ ಸಮಾನಾರ್ಥದ (ಪರ್ಯಾಯ) ಹೆಸರು ಎಂದಿರುವ ಜಾಗದಲ್ಲಿ ಕೋಡ್ ಸಂಖ್ಯೆ (A-0227) ರಂತೆ ಬಂಟ್ ಎಂದು ನಮೂದಿಸಬೇಕು ಎಂದು ಸಮಾಜ ಬಾಂಧವರಲ್ಲಿ ಕೇಳಿಕೊಳ್ಳುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಕಾವು ಎ.ಹೇಮನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ್ ಮೋಹನ್ ರೈ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೆಡಿ ಮತ್ತಿತರರು ಉಪಸ್ಥಿತರಿದ್ದರು.











