ಉಜಿರೆ, ಸೆ. 21 :: ಮಂಗಳೂರು, ಬೆಂಗಳೂರು, ಹಾಸನ, ಉಡುಪಿ, ಉಜಿರೆ, ಧಾರವಾಡ ಹಾಗೂ ಮೈಸೂರಿನಲ್ಲಿರುವ ಕೆ.ಜಿ. ಯಿಂದ ಪಿ.ಜಿ ವರೆಗಿನ ೫೬ ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿಗಳ ಸಮಾವೇಶ ಭಾನುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.
ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಉಡುಪಿಯ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ. ಎಂ. ಮೋಹನ ಆಳ್ವ ಮಾತನಾಡಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ತನ್ನ ಬದುಕಿನ ಮಾರ್ಗದರ್ಶಕರು ಹಾಗೂ ಗುರುಗಳಾಗಿದ್ದು ತಾನು ಅವರ ಅಭಿಮಾನಿ, ಶಿಷ್ಯನಾಗಿರುತ್ತೇನೆ..ಪಾರಂಪರಿಕ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಯೋಗಾಭ್ಯಾಸಗಳಿಗೆ ಹೆಗ್ಗಡೆಯವರ ಸೇವೆ ಮತ್ತು ಕೊಡುಗೆಯನ್ನು ಧನ್ಯತೆಯಿಂದ ಸ್ಮರಿಸಿದರು. ಹಾಸನ ಮತ್ತು ಬೆಂಗಳೂರಿನಲ್ಲಿರುವ ಎಸ್.ಡಿ.ಎಮ್. ಆಯುರ್ವೇದ ಕಾಲೇಜುಗಳು ಮತ್ತು ಆಸ್ಪತ್ರೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಿವೆ. ಉಜಿರೆ ಮತ್ತು ಧರ್ಮಸ್ಥಳದಲ್ಲಿರುವ ಎಸ್.ಡಿ.ಎಮ್. ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಕೂಡಾ ಉತ್ತಮ ಸೇವೆಯಲ್ಲಿ ಚಿರಪರಿಚಿತವಾಗಿವೆ ಎಂದರು.
ಪೂನಾದ ಕಾನೂನು ಕಾಲೇಜಿನ ಡೀನ್ ಹಾಗೂ ಮಂಗಳೂರಿನ ಎಸ್.ಡಿ.ಎಮ್. ಕಾನೂನು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಮಾಜಿ ಉಪನ್ಯಾಸಕಿ ಪ್ರೊ. ಶಶಿಕಲಾ ಗುರುಪುರ ಮಾತನಾಡಿ, ಹೆಗ್ಗಡೆಯವರು ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಎಲ್ಲಾ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳಲ್ಲಿ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಹೆಗ್ಗಡೆಯವರ ನೇತೃತ್ವದಲ್ಲಿ ಎಸ್.ಡಿ.ಎಮ್. ಸಂಸ್ಥೆಗಳ ಸೇವೆ-ಸಾಧನೆಯನ್ನು ಶ್ಲಾಘಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದೇವರ ಅನುಗ್ರಹದೊಂದಿಗೆ, ಎಲ್ಲರ ಪ್ರೀತಿ-ವಿಶ್ವಾಸ, ಗೌರವ ಹಾಗೂ ಅಭಿಮಾನವೇ ತಮಗೆ ಶ್ರೀರಕ್ಷೆಯಾಗಿದೆ. ತನ್ನ ಸೇವಾಕಾರ್ಯಗಳನ್ನು ಮುಂದುವರಿಸಲು ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು.
ಧಾರವಾಡದ ಎಸ್.ಡಿ.ಎಮ್. ವೈದ್ಯಕೀಯ ಕಾಲೇಜಿನ ಡಾ. ಅನಿಲ್ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು,
ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಹೆಗ್ಗಡೆಯವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಶ್ರೇಯಸ್ ಕುಮಾರ್ ಉಪಸ್ಥಿತರಿದ್ದರು.
ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ.ಎಸ್. ಸತೀಶ್ಚಂದ್ರ ಸ್ವಾಗತಿಸಿದರು. ಎಸ್.ಡಿ.ಎಮ್. ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ಧನ್ಯವಾದವಿತ್ತರು. ಮೂಡಬಿದ್ರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಿ.ಇ.ಒ. ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.











